ಪಾರ್ಕ್ ನುಂಗಲು ಹೊರಟಿದ್ದ ವಿ.ಎಸ್.ವಿ.ಪ್ರಸಾದ ಮೇಲೆ ಪಾಲಿಕೆಯಿಂದ ಪೊಲೀಸರಿಗೆ ದೂರು

ಹುಬ್ಬಳ್ಳಿ: ನಗರದ ನವೀನ ಪಾರ್ಕ ನಿವಾಸಿಗಳಿಗೆ ಉದ್ಯಾನವನ ಮತ್ತು ಬಯಲು ಜಾಗ ಮೀಸಲಿಟ್ಟ ಜಾಗದಲ್ಲಿ ವಿಎಸ್ ವಿ ಪ್ರಸಾದ, ಯಾವುದೇ ಪರವಾನಿಗೆ ಪಡೆಯದೇ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದನ್ನ ತೆರವುಗೊಳಿಸುವಂತೆ ಕೇಶ್ವಾಪುರ ಠಾಣೆಗೆ ದೂರು ನೀಡಿದ್ದು, ಕಟ್ಟಡ ಅನಧಿಕೃತವಾಗಿಯೇ ನಿರ್ಮಾಣವಾಗುತ್ತಿತ್ತು ಎಂದು ಪಾಲಿಕೆ ಹೇಳಿದೆ.
ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಸಂಬಂಧಿಸಿದ ಸರ್ವೇ ನಂಬರ 31(ಬ) ಮತ್ತು 32 ರಲ್ಲಿ 4 ಎಕರೆ 28 ಗುಂಟೆ ಜಾಗೆಯನ್ನ ನವೀನ ಪಾರ್ಕ ನಿವಾಸಿಗಳಿಗೆ ಉದ್ಯಾನವನ ಮಾಡಲು ಜಾಗೆ ಬಿಡಲಾಗಿದೆ. ಅಲ್ಲಿಯೇ ಸುಮಾರು 20 ಸಾವಿರ ಚೌರಸ್ ಅಡಿಯಷ್ಟು ಜಾಗೆಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ರೇಲ್ವೆ ಗುತ್ತಿಗೆದಾರರೂ ಆಗಿರುವ ವಿಎಸ್ ವಿ ಪ್ರಸಾದರಿಗೆ ಕಟ್ಟಡ ನಿರ್ಮಾಣ ಮಾಡದಂತೆ ಎರಡು ಬಾರಿ ಪಾಲಿಕೆಯಿಂದ ನೋಟೀಸ್ ಕೊಟ್ಟಿದ್ದರೂ, ಕಟ್ಟಡ ನಿರ್ಮಾಣ ಕಾರ್ಯ ನಿರಂತರವಾಗಿ ನಡೆಯುತ್ತಲೆ ಇದೆ. ಈಗಾಗಲೇ ಕಟ್ಟಿರುವ ಕಟ್ಟಡವನ್ನೂ ತೆರವುಗೊಳಿಸುವಂತೆ ನೋಟಿಸ್ ನೀಡಿದರೂ, ಮತ್ತೆ ಕಾಮಗಾರಿ ಆರಂಭವಾಗಿದೆ ಎಂದು ಪಾಲಿಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದೆ.
ತಕ್ಷಣವೇ ಪೊಲೀಸರು, ಅನಧಿಕೃತವಾಗಿ ನಡೆದಿರುವ ಕಾಮಗಾರಿಯನ್ನ ಬಂದ್ ಮಾಡಿಸಿ, ಕಟ್ಟಡವನ್ನ ತೆರವುಗೊಳಿಸುವಂತೆ ಮಾಡಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳು ವಿಎಸ್ ವಿ ಪ್ರಸಾದ ವಿರುದ್ಧ ದೂರು ನೀಡಿದ್ದಾರೆ.