ಕೊನೆಯುಸಿರೆಳೆದ ಸರಕಾರಿ ಶಾಲೆ ಶಿಕ್ಷಕಿ- ಕಣ್ಣು ದಾನ

ಹುಬ್ಬಳ್ಳಿ: ಜೀವನದಲ್ಲಿ ಇದ್ದಾಗಲೂ ಇಲ್ಲದಾಗಲೂ ಸಾರ್ಥತೆಯನ್ನ ಮೆರೆಯುವ ಜನರು ವಿರಳ. ಆದರೆ, ಇಲ್ಲೋಬ್ಬ ಸರಕಾರಿ ಶಾಲೆಯ ಶಿಕ್ಷಕಿ ತಾನು ಇರುವಾಗಲೇ, ಕಣ್ಣು ದಾನವನ್ನ ಮಾಡಿ, ಇನ್ನಿಲ್ಲವಾದಾಗ ಕುಟುಂಬದವರು ಅದನ್ನ ನಿಭಾಯಿಸಿರುವ ಘಟನೆಯೊಂದು ಅಮರಗೋಳದಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹೇಮಾ ಅಶೋಕ ತಿಮ್ಮಾಪುರ ಇಂದು ನಸುಕಿನ ಜಾವ ತೀವ್ರ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಉತ್ತಮ ಶಿಕ್ಷಕಿಯಾಗಿದ್ದ ಹೇಮಾ ಟೀಚರ್ ಮೊದಲೇ ಕಣ್ಣುಗಳನ್ನ ಡಾ.ಎಂ.ಎಂ.ಜೋಶಿ ಆಸ್ಪತ್ರೆಗೆ ದಾನವನ್ನ ಮಾಡಿದ್ದರು.
ಅನಾರೋಗ್ಯದಿಂದ ಮೃತಪಟ್ಟ ಶಿಕ್ಷಕಿಯ ಕಣ್ಣುಗಳನ್ನ ಆಸ್ಪತ್ರೆಯಲ್ಲಿ ಪಡೆದು, ಅಮರಗೋಳದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಶಿಕ್ಷಕಿ ಹೇಮಾ ಅವರ ಪತಿ ಪೊಲೀಸ್ ಇಲಾಖೆಯಲ್ಲಿದ್ದು, ಒಂದು ಗಂಡು ಒಂದು ಹೆಣ್ಣು ಮಗುವನ್ನ ಅಗಲಿದ್ದಾರೆ.
ಓರ್ವ ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಹೇಮಾ ತಿಮ್ಮಾಪುರ, ಪ್ರತಿದಿನವೂ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡುತ್ತಿದ್ದವರು, ಕೊನೆಯಲ್ಲೂ ಕಣ್ಣು ದಾನ ಮಾಡುವ ಮೂಲಕ ಮತ್ತಷ್ಟು ಜೀವನ್ಮಯತೆ ಮೆರೆದಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರಕಲಿದೆ ಎಂದು ಶಿಕ್ಷಕ ವಲಯ ಪ್ರಾರ್ಥಿಸಿದೆ.