Posts Slider

Karnataka Voice

Latest Kannada News

ಹುಬ್ಬಳ್ಳಿ ಫ್ಲೈಓವರ್: ಚೆನ್ನಮ್ಮನಿಗೆ ಅವಮಾನ – ರಜತ್ ಉಳ್ಳಾಗಡ್ಡಿಮಠ ಆಕ್ರೋಶ

1 min read
Spread the love

ಹುಬ್ಬಳ್ಳಿ : ನಗರದ ಕೇಂದ್ರ ಬಿಂಧುವಾಗಿರುವ ಚನ್ನಮ್ಮ ವೃತ್ತದಲ್ಲಿ ಚತುಷ್ಪತ ರಸ್ತೆಯ ಫ್ಲೈಓವರ್ ನಿರ್ಮಾಣದ ನೀಲನಕ್ಷೆಯಲ್ಲಿ ಮಹಾನಗರಕ್ಕೆ ಕಳಸಪ್ರಾಯದಂತಿರುವ ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿಯನ್ನು ಮೇಲಕ್ಕೇರಿಸದೆ ತೀವ್ರ ಅವಮಾನ ಮಾಡಲಾಗಿದೆ ಎಂದು  ಕೆಪಿಸಿಸಿ ಸಂಯೋಜಕ,   ಹುಬ್ಬಳ್ಳಿ -ಧಾರವಾಡ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರ ವಿರುದ್ಧ ಪ್ರಪ್ರಥಮವಾಗಿ ಹೋರಾಟದ ಕಹಳೆ ಊದಿದ ದಿಟ್ಟ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮನ ಪ್ರತಿಮೆಗೆ ಅವಮಾನ ಆಗುವ ರೀತಿಯಲ್ಲಿ ಈ ಯೋಜನೆಯ ನಕಾಶೆ ತಯಾರಿಸಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇಲ್ಲಿಯ ಚತುಷ್ಪತ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ಗುರುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ನಗ ತುಂಬೆಲ್ಲ ಬ್ಯಾನರ್ ಗಳನ್ನು ಹಾಕಲಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆ ಮಾಡಲಾಗಿರುವ ನೀಲನಕ್ಷೆಯಲ್ಲಿ ಚನ್ನಮ್ಮನ ಪುತ್ಥಳಿಯನ್ನು ರಸ್ತೆಗಿಂತ ಕೆಳಗೆ ಕಾಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ  ಗಂಡು  ಮೆಟ್ಟಿನ  ನಾಡು  ಎಂದು ಖ್ಯಾತಿ ಪಡೆಯಲು ಸ್ವಾತಂತ್ರ್ಯದ  ಬೆಳ್ಳಿ ಚುಕ್ಕಿ  ಕಿತ್ತೂರು  ರಾಣಿ  ಚೆನ್ನಮ್ಮನ  ಪುತ್ಥಳಿ  ಕಾರಣ. ಆದರೆ  ಬಿಜೆಪಿ  ಶಾಸಕ ಜಗದೀಶ್  ಶೆಟ್ಟರ್  ಮತ್ತು  ಕೇಂದ್ರ  ಮಂತ್ರಿ  ಪ್ರಹ್ಲಾದ  ಜೋಶಿ  ಹುಬ್ಬಳ್ಳಿ  ಅಭಿವೃದ್ಧಿ  ಹೆಸರಿನಲ್ಲಿ  ಚನ್ನಮ್ಮನಿಗೆ ಅಗೌರವವನ್ನು ತೋರುತ್ತಿದ್ದಾರೆ. ಮುಂದೆ  ನಿರ್ಮಾಣವಾಗಲಿರುವ ರಸ್ತೆ ಹಾಗೂ ವೃತ್ತ ಚೆನ್ನಮ್ಮ  ಪುತ್ಥಳಿಗಿಂತ ಮೇಲೆ ಬರುವಂತೆ ನೀಲನಕ್ಷೆ ತಯಾರಿಸಲಾಗಿದೆ. ತನ್ಮೂಲಕ ಸಮಸ್ತ  ಕರ್ನಾಟಕ ಜನತೆ  ಮತ್ತು  ರಾಣಿ  ಚನ್ನಮ್ಮ ಅಭಿಮಾನಿಗಳು ತಲೆ  ತಗ್ಗಿಸುವಂತಾಗಿದೆ ಎಂದು ರಜತ್ ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯ ಹೃದಯ ಭಾಗ, ಜನನಿಬಿಡ ಪ್ರದೇಶವಾದ ಚನ್ನಮ್ಮ ವೃತ್ತದಿಂದ ಪಕ್ಕದ ದಾಜಿಬಾನ ಪೇಟೆಯವರೆಗೆ ಸಾಕಷ್ಟು ಹೊಟೇಲ್, ಬಾರ್ ರೆಸ್ಟೋರೆಂಟ್ ಗಳಿವೆ. ಈ ನಕಾಶೆ ನೋಡಿದಾಗ ಅದರಲ್ಲಿ ಚನ್ನಮ್ಮನ ಪ್ರತಿಮೆ ಕೆಳಗಡೆ ಇದ್ದು, ಅದರ ಸುತ್ತಲೂ ಎತ್ತರಕ್ಕೆ ಫ್ಲೈ ಓವರ್ ಬರಲಿದೆ. ಈ ರೀತಿ ಮಾಡುವುದರಿಂದ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಗೆ ಅಗೌರವ ತೋರಿದಂತಾಗುತ್ತದೆ. ಅಲ್ಲದೇ ಕೆಡಿಗೆಡಿಗಳು, ಕುಡುಕರು ಮೇಲಿನಿಂದ ಮದ್ಯದ ಬಾಟಲಿಗಳು ಅಥವಾ ಕಸಕಡ್ಡಿಗಳನ್ನು ಚೆಲ್ಲಿದರೆ ನಾವು ವೀರ ಸ್ವಾತಂತ್ರ್ಯ ಹೋರಾಟಗಾರ್ತಿಗೆ ಅಗೌರವ, ಅವಮಾನ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರು, ವೀರ ರಾಣಿ  ಕಿತ್ತೂರು ಚನ್ನಮ್ಮನ ಅಭಿಮಾನಿಗಳು, ಚನ್ನಮ್ಮನ ಬಲಗೈ ಬಂಟ ವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಬೀದಿಗಳಿದು, ಈಗ ಭೂಮಿ ಪೂಜೆಗೆ ಯಾವ ರೀತಿಯಲ್ಲಿ  ಪ್ರಲ್ಹಾದ್ ಜೋಶಿ ಹಾಗೂ ಜಗದೀಶ ಶೆಟ್ಟರ್ ಅವರ ಭಾವಚಿತ್ರಗಳಿರುವ ಫ್ಲೆಕ್ಸ್ ಗಳು ಹುಬ್ಬಳ್ಳಿ ತುಂಬ ರಾರಾಜಿಸುತ್ತಿವೆಯೋ ಅದೇ ರೀತಿಯಲ್ಲಿ ರಾಣಿ ಚನ್ನಮ್ಮನ ಪ್ರತಿಮೆಗೆ ಅಗೌರವ ತೋರಿದ ಮಹಾ ನಾಯಕರು ಎಂದು ಬಿಂಬಿಸಿ, ಹುಬ್ಬಳ್ಳಿ ತುಂಬ ನಾವು ಈ ನಾಯಕರ ಭಾವಚಿತ್ರವಿರುವ ಫ್ಲೆಕ್ಸ್ ಗಳನ್ನು ಹಾಕಿ ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದುರಜತ್ ಉಳ್ಳಾಗಡ್ಡಿಮಠ ಅವರು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯ ಅಭಿವೃದ್ಧಿ ವಿಷಯದಲ್ಲಿ ನಾವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ಆದರೆ ಅದೇ ಸಮಯದಲ್ಲಿ ಇಂತಹ ಮಹಾನ್ ನಾಯಕಿಗೆ ಅಗೌರವ ತೋರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.


Spread the love

Leave a Reply

Your email address will not be published. Required fields are marked *