ಪೊಲೀಸ್ ಇಲಾಖೆ: 25 ವರ್ಷ-37 ಕಡೆ ವರ್ಗಾವಣೆ- ಬೇಸತ್ತ ಡಿವೈಎಸ್ಪಿ ರಾಜೀನಾಮೆ
1 min readಬಳ್ಳಾರಿ: ಸತತ 25 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೋರ್ವರು ಹಿರಿಯ ಅಧಿಕಾರಿಗಳ ನೋವಿನ ಮಾತನ್ನ ಕೇಳಿ, ಬೇಸರದಿಂದ ರಾಜೀನಾಮೆ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆಯ ಹಂಪಿ ಡಿವೈಎಸ್ಪಿ ಆಗಿರುವ ಎಸ್.ಎಸ್.ಕಾಶಿ ಎಂಬುವವರೇ ರಾಜೀನಾಮೆ ನೀಡಿದ ಅಧಿಕಾರಿಯಾಗಿದ್ದು, ಕೆಲವೇ ತಿಂಗಳ ಹಿಂದೆ ಹಂಪಿಯಲ್ಲಿ ಡಿವೈಎಸ್ಪಿಯಾಗಿ ವರ್ಗಾವಣೆ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಹಿರಿಯ ಅಧಿಕಾರಿಗಳ ಕಿರುಕುಳದಿಂದಲೇ ಈ ಹಿಂದೆ ನ್ಯಾಯಾಲಯಕ್ಕೆ ಹೋಗಿದ್ದ ಎಸ್.ಎಸ್.ಕಾಶಿ ಅವರಿಗೆ ಇದೇ ವರ್ಷ ಮಾರ್ಚ 20ಕ್ಕೆ ಹಂಪಿಗೆ ವರ್ಗಾವಣೆ ಮಾಡಲಾಗಿತ್ತು. ಕೊರೋನಾ ಸಮಯದಲ್ಲಿ ವರ್ಗಾವಣೆಯಾಗಿ ಬಂದ ಅಧಿಕಾರಿಗೆ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಸುಖಾಸುಮ್ಮನೆ ತರಾಟೆಗೆ ತೆಗೆದುಕೊಂಡಿದ್ದರು.
ಈ ಎಲ್ಲ ಕಾರಣಗಳಿಗಾಗಿ ಬೇಸತ್ತ ಡಿವೈಎಸ್ಪಿಯವರು ರಾಜೀನಾಮೆ ಪತ್ರವನ್ನ ಐಜಿಪಿಗೆ ರವಾನೆ ಮಾಡಿದ್ದಾರೆಂದು ಹೇಳಲಾಗಿದ್ದು, ಮುಂದಿನ ಕ್ರಮವನ್ನ ಸರಕಾರ ತೆಗೆದುಕೊಳ್ಳಲಿದೆ.