ಊರಿಗೆ ಬಂದವರು ನೀರಿಗೆ ಬರಲ್ವಾ.. ಬದಲಾಯಿತು ಗಾದೆ ಮಾತು.. ಜಿಲ್ಲೆಗೆ ಬಂದವರೂ ಮಾವನ ಮನೆಗೆ ಬರಾಕಿಲ್ವಾ..!
1 min readಹುಬ್ಬಳ್ಳಿ: ತಾಲೂಕಿನ ಕೋಳಿವಾಡ ಗ್ರಾಮ ಹೊಸದೊಂದು ಅನುಭವಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲೆಗೆ ಬಂದು ಹಲವು ತಿಂಗಳ ನಂತರ ಮೊದಲ ಬಾರಿಗೆ ಮಾವನೂರಿಗೆ ಭೇಟಿ ನೀಡಿ ಖುಷಿಪಟ್ಟರು.
ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನಾನು ಕೋಳಿವಾಡ ಗ್ರಾಮದ ಅಳಿಯ. ಹಿರಿಯ ಐ.ಎ.ಎಸ್ ಅಧಿಕಾರಿಯಾದ ನಮ್ಮ ಮಾವ ಶಿವಯೋಗಿ ಕಳಸದ ಕೋಳಿವಾಡದವರು. ಕೋಳಿವಾಡ ಬಗ್ಗೆ ನನಗೆ ವಿಶೇಷ ಅಭಿಮಾನವಿದೆ. ಆರಂಭದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕೊರೊನಾ ಲಾಕ್ ಡೌನ್ ಜಾರಿಯಲ್ಲಿ ಇತ್ತು. ಕೋವಿಡ್ ತುರ್ತು ಸಂದರ್ಭದ ಕಾರ್ಯಭಾರದ ನಿಮಿತ್ತ ಗ್ರಾಮಕ್ಕೆ ಆಗಮಿಸಲು ಸಾಧ್ಯವಾಗಿರಲ್ಲಿಲ್ಲ. ಇದಾದ ಬಳಿಕ ಪದವೀಧರ ಕ್ಷೇತ್ರ ಚುನಾವಣೆ ಕಾರ್ಯದಲ್ಲಿ ನಿರತನಾಗಿದ್ದೆ ಎಂದು ಹೇಳಿದರು.
ಇಂದು ಗ್ರಾಮಕ್ಕೆ ಬರಲು ಯೋಗ ಕೂಡಿ ಬಂದಿದೆ. ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಮದ ಬಹುದಿನ ಬೇಡಿಕೆಯಾಗಿದ್ದ ರುದ್ರಭೂಮಿಗೆ ಜಮೀನು ಖರೀದಿ ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗಿದೆ. 94ಸಿ ಅಡಿಯಲ್ಲಿ ಗ್ರಾಮದ 26 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ವಿವಿಧ ಪಿಂಚಣಿಗಾಗಿ ಅರ್ಜಿ ಸಲ್ಲಿಸದವರಿಗೆ ಪಿಂಚಣಿ ಪತ್ರಗಳನ್ನು ನೀಡಲಾಗುತ್ತಿದೆ. ಗ್ರಾಮದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲಯತ್ ಆಯೋಜಿಸಲಾಗಿದ್ದು ಗ್ರಾಮಸ್ಥರು ಇಲ್ಲಿಯೇ ಅರ್ಜಿಗಳನ್ನು ನೀಡಬಹುದು. ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ, ವೃದ್ದಾಪ್ಯ, ವಿಧವಾ, ಮನಸ್ವಿನಿ ಹಾಗೂ ಅಂಗವಿಕಲ ವೇತನದಡಿ ಆಯ್ಕೆಯಾದ 19 ಪಾಲನುಭವಿಗಳಿಗೆ ಪಿಂಚಣಿ ಪತ್ರಗಳನ್ನು ನೀಡಲಾಯಿತು. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಸ್ವಯಂ ಚಾಲಿತ ಕೂರಿಗೆ, ರೋಟವೇಟರ್, ಟ್ರಾಕ್ಟರ್ ಟ್ರೇಲರ್‍ಗಳನ್ನು ಪಲಾನುಭವಿಗಳಿಗೆ ವಿತರಿಸಲಾಯಿತು. ಗ್ರಾಮದ ರುದ್ರಭೂಮಿಗೆ ಜಮೀನು ನೀಡಿದ ಚನ್ನಬಸಮ್ಮ ಕಣವಿ ಅವರಿಗೆ 25,72,884 ರೂಪಾಯಿಗಲ ಚಕ್ ನೀಡಲಾಯಿತು. ವಿವಿಧ ಇಲಾಖೆಗಳಿಗೆ ಸೇರಿದ ಒಟ್ಟು 25 ಅರ್ಜಿಗಳು ಸ್ವೀಕೃತವಾದವು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿ.ಪಂ. ಸದಸ್ಯೆ ಚೈತ್ರಾ ಶಿರೂರ, ಉಪವಿಭಾಗಧಿಕಾರಿ ಗೋಪಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುರುಷೋತಮ್, ಕೆ.ಎಸ್.ಸ್ ಅಧಿಕಾರಿ ರಾಘವೇಂದ್ರ, ತಾ.ಪಂ. ಸದಸ್ಯೆ ದ್ಯಾಮಕ್ಕ ಸತ್ಯಮ್ಮನವರ, ತಹಶೀಲ್ದಾರ್ ಪ್ರಕಾಶ್ ನಾಶಿ, ತಾ.ಪಂ. ಇಓ ಗಂಗಾಧರ ಕಂದಕೋರ, ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಗಾಣಿಗೇರ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.