ಜಿಂಕೆ ಸಾರಿನೊಂದಿಗೆ ಸಿಕ್ಕಿ ಬಿದ್ದ ಮೂವರು ಅಂದರ್
ಕಾರವಾರ: ಕಾಡು ಪ್ರಾಣಿ ಭೇಟೆಯಾಡಿದ ಆರೋಪದಡಿ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ ಘಟನೆ ಜೋಯಿಡಾದ ಜಗಲ್ ಪೇಟ್ ಅರಣ್ಯವ್ಯಾಪ್ತಿಯಲ್ಲಿ ನಡೆದಿದೆ.
ಜಗಲ್ ಬೇಟ್ ನ ಕುಮ್ರಾಲ್ ಗ್ರಾಮದ ಮನೋಹರ್ ರಾಮಾ ಕದಂ, ದತ್ತಾ ರಾಮಾ ಕದಂ, ಈಶ್ವರ್ ಚಂದ್ರು ಹಣಬರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಕುಮ್ರಾಲ್ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಜಿಂಕೆಯನ್ನು ಭೇಟೆಯಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಿಂಕೆಯ ಮಾಂಸದಿಂದ ತಯಾರಿಸಿದ ಪದಾರ್ಥ, ಜಿಂಕೆಯ ಚರ್ಮ ಹಾಗೂ ಭೇಟೆಯಾಡಲು ಬಳಸಿದ ನಾಡ ಬಂದೂಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂವರು ಆರೋಪಿಗಳು ಜಿಂಕೆಯನ್ನ ಭೇಟೆಯಾಡಿ ಕಾಡಿನಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ಬರುತ್ತಿದ್ದರು. ಕೆಲವು ಬಾರಿ ಜಿಂಕೆಯ ಮಾಂಸವನ್ನ ಮಾರಾಟವನ್ನೂ ಮಾಡುತ್ತಿದ್ದರೆಂದು ಗೊತ್ತಾಗಿದೆ.