ತಕ್ಷಣವೇ ಶಿಕ್ಷಕರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ: ಸಾವಿತ್ರಿಬಾಯಿ ಫುಲೆ ಸಂಘದ ಆಗ್ರಹ

ಧಾರವಾಡ: 2020-2025 ನೇ ಸಾಲಿನ ಅವಧಿಗಾಗಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ.ಲತಾ ಎಸ್ ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಆಗ್ರಹಿಸಿದ್ದಾರೆ.
ಪ್ರಸ್ತುತ ನಡೆಸುತ್ತಿರುವ ಚುನಾವಣೆ ಪ್ರಕ್ರಿಯೆ ದೋಷಪೂರಿತವಾಗಿದೆ. ನಿವೃತ್ತ ಅಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳಾಗಿ ಮನಬಂದಂತೆ ನೇಮಿಸಿಕೊಂಡಿದ್ದು ಇಲಾಖೆಗೂ ಅವರಿಗೂ ಸಂಬಂಧವಿಲ್ಲ. ಪ್ರತಿಸಲ ಚುನಾವಣೆ ನಡೆಸುವಾಗ ಕೇಂದ್ರದ ರಾಜ್ಯ ಹಂತದಲ್ಲಿ, ರಾಜ್ಯ ನಿರ್ದೇಶಕರು, ಜಿಲ್ಲಾ ಹಂತದಲ್ಲಿ, ಉಪ ನಿರ್ದೇಶಕರು, ತಾಲೂಕು ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ಚುನಾವಣಾ ಅಧಿಕಾರಿಗಳು ಆಗಿರುತ್ತಿದ್ದರು. ಆದರೆ ಈ ಸಲ ಈ ನಿಯಮ ಪಾಲಿಸಿಲ್ಲ ಎಂದು ದೂರಿದ್ದಾರೆ.
ಸದಸ್ಯತ್ವ ಹಣ ವೇತನದಲ್ಲಿ ಕಟಾವಣೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ. ಉಮೇದುವಾರಿಕೆ ಸಲ್ಲಿಸುವ ಶಿಕ್ಷಕರು ಗೊಂದಲದಲ್ಲಿ ಹಾಗೂ ಭಯದಲ್ಲಿರುವರು. ಈ ಅಂಶ ಮನಗಂಡು ಸರ್ಕಾರ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಸೂಚಿಸಿದರೂ ಆದೇಶ ಪಾಲಿಸುತ್ತಿಲ್ಲ. ನ್ಯೂನತೆ ಸರಿಪಡಿಸಿಕೊಂಡು ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಹೋರಾಟಕ್ಕೆ ಇಳಿಯಲಾಗುವುದೆಂದು ತಿಳಿಸಿದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಶಿಕ್ಷಕರ ಸಂಘದ ಚುನಾವಣೆ ನಡೆದು ಇತರರಿಗೆ ಮಾದರಿಯಾಗಿ ಉಳಿಯಬೇಕಾಗಿದ್ದ ಶಿಕ್ಷಕರ ಸಂಘದ 2020-25 ನೇ ಸಾಲಿನ ಚುನಾವಣೆ ಸಂಘರ್ಷಕ್ಕೆ ದಾರಿಯಾಗಿರುವುದು ಖೇದಕರ. 2020-25 ನೇ ಅವಧಿಯ ಶಿಕ್ಷಕರ ಸಂಘದ ಚುನಾವಣೆಗೆ ಮಹಿಳಾ ಮೀಸಲಾತಿ ಅಡಿಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಮಹಿಳಾ ಶಿಕ್ಷಕಿಯರಿಗೆ ಬೆದರಿಕೆಯ ಕರೆಗಳು ಬರುವುದನ್ನು ಸಂಘದವರು ಖಂಡಿಸಿದ್ದಾರೆ.
ಶಿಕ್ಷಕ-ಶಿಕ್ಷಕರ ಮಧ್ಯೆ ಉಂಟಾದ ಕಂದಕಗಳು ದೂರವಾಗಲು ತಕ್ಷಣವೇ ಶಿಕ್ಷಕರ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸ್ನೇಹ ಸೌಹಾರ್ದತೆಯಿಂದ ಚುನಾವಣೆ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.