ಮಸೀದಿ ಸ್ಪೀಕರ್: ಫೇಕ್ ಸಂದೇಶ ವೈರಲ್- ಪೊಲೀಸ್ ಇಲಾಖೆ ಸ್ಪಷ್ಟನೆ
1 min readಬೆಂಗಳೂರು: ರಾಜ್ಯದ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಸರ್ಕಾರದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಅವರ ಹೆಸರಿನಲ್ಲಿ ಸುತ್ತೋಲೆ ಒಂದನ್ನು ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನೆ ಮಾಡಲಾಗಿದೆ. ಇದೇ ನವೆಂಬರ್ 2 ರಂದು ಸುತ್ತೋಲೆಯನ್ನು ಹೊರಡಿಸಲಾಗಿದ್ದು, ನಿಯಮಾನುಸಾರ ಸೂಕ್ತಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಗಳ ಎಸ್‌ಪಿಗಳಿಗೆ ಸೂಚಿಸಲಾಗಿತ್ತು.
ಬೆಂಗಳೂರಿನ ನ್ಯಾಯವಾದಿ ಹರ್ಷ ಮುತಾಲಿಕ್ ಎಂಬುವರು ಸಲ್ಲಿಸಿದ್ದ ಮನವಿ ಆಧರಿಸಿ ಈ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಧ್ವನಿವರ್ಧಕಗಳ ಬಗ್ಗೆ ಸುಪ್ರೀಂಕೋರ್ಟ್ ಕೂಡ ಮಾರ್ಗಸೂಚಿಗಳನ್ನು ಪ್ರಕಟಿಸಿರುವುದರಿಂದ ಪೊಲೀಸ್ ಇಲಾಖೆಯ ಸುತ್ತೋಲೆ ಬಗ್ಗೆ ಸಾರ್ವಜನಿಕ ಚರ್ಚೆ ಶುರುವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಪರ-ವಿರೋಧ ಚರ್ಚೆಗಳು ನಡೆದಿವೆ. ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಧ್ವನಿವರ್ಧಕ ತೆರವು ಕುರಿತು ಮಹತ್ವದ ಆದೇಶ ಮಾಡಿದೆ.
ಬೆಂಗಳೂರಿಗ ನ್ಯಾಯವಾದಿ ಹರ್ಷ ಮುತಾಲಿಕ್ ಸಲ್ಲಿಸಿದ್ದ ಮನವಿಯನ್ನು ಉಲ್ಲೇಖಿಸಿ ಧ್ವನಿವರ್ಧಕ ನಿಷೇಧ ಸುತ್ತೋಲೆ ಕಳಿಸಲಾಗಿದೆ ಎನ್ನಲಾಗಿತ್ತು. ಸೆಪ್ಟಂಬರ್ 30, 2020ರಂದು ವಕೀಲರು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿಯೊಂದನ್ನು ಸಲ್ಲಿಕೆ ಮಾಡಿದ್ದರು. ಅದರಲ್ಲಿ ರಾಜ್ಯಾದ್ಯಂತ ಇರುವ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಸೂಚನೆ ನೀಡಬೇಕು ಎಂದು ಹರ್ಷ ಮುತಾಲಿಕ್ ಮನವಿಯನ್ನು ಸಲ್ಲಿಸಿದ್ದರು.
ಮನವಿ ಆಧರಿಸಿ ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಲ್ಲಿಸುವ ಪ್ರಾರ್ಥನೆಯಲ್ಲಿ ಹೆಚ್ಚು ಧ್ವನಿ ಉಂಟಾಗುತ್ತಿರುವುದರಿಂದ ಅನೇಕ ತೊಂದರೆಗಳು ಆಗುತ್ತಿವೆ. ಈ ಬಗ್ಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಆದ್ದರಿಂದ, ಈ ಬಗ್ಗೆ ಮಾಹಿತಿ ಹಾಗೂ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಸ್ಪಷ್ಟನೆ ಕೊಟ್ಟಿದೆ.
ಸುತ್ತೋಲೆ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ಕೊಟ್ಟಿದ್ದು, ಈ ಪತ್ರವನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಗುಮಾಸ್ತರು ಕಿಡಿಗೇಡಿತನದಿಂದ ಕರ್ನಾಟಕ ರಾಜ್ಯದ ಪೊಲೀಸ್ ಕಮೀಷನರ್‌ಗಳು ಹಾಗೂ ಜಿಲ್ಲಾ ಎಸ್‌ಪಿಗಳಿಗೆ ಕಳುಹಿಸಿರುತ್ತಾರೆ.
ಆದರೆ ಈ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಸೀದಿಗಳಲ್ಲಿರುವ ಧ್ವನಿ ವರ್ಧಕಗಳನ್ನು ತೆಗೆಯುವಂತ ಯಾವುದೇ ನಿರ್ದೇಶನವನ್ನು ಪೊಲೀಸ್ ಇಲಾಖೆಯಿಂದ ನೀಡಿರುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ಕೊಟ್ಟಿದೆ. ಈ ಬಗ್ಗೆ ಮುಂದಿನ ವಿಚಾರಣೆಗೆ ಆದೇಶಿಸಲಾಗಿದೆ ಸಾರ್ವಜನಿಕರು ಇಂತಹ ಗಾಳಿಸುದ್ದಿ ಅಥವಾ ಹಾದಿ ತಪ್ಪಿಸುವಂತಹ ಸುದ್ದಿಗಳಿಗೆ ಗಮನ ಕೊಡದಂತೆ ಸೂಚಿಸಲಾಗಿದೆ.