ಹೊಲದ ದಾರಿಗಾಗಿ ದಾಯಾದಿಗಳ ಕಲಹ- ರಾಡ್ ನಿಂದ ಹೊಡೆತ
1 min readಹುಬ್ಬಳ್ಳಿ: ಜಮೀನಿಗೆ ಹೋಗುವ ದಾರಿಗಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ರಾಡನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಮ ವೀರಾಪೂರ ಗ್ರಾಮದಲ್ಲಿ ಸಂಭವಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಹೊಲದಲ್ಲಿನ ದಾರಿಯ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ ಮಾದರ ಎಂಬುವವರ ಮೇಲೆ, ಅವರದ್ದೆ ದೊಡ್ಡಪ್ಪನ ಮಕ್ಕಳೇ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ತಲೆಗೆ ಬಲವಾದ ಹೊಡೆತ ಬಿದಿದ್ದು, ಗಾಯಾಳು ರಮೇಶನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಮೇಶ ಮಾದರ ಮೇಲೆ ಅವನ ದೊಡ್ಡಪ್ಪನ ಮಕ್ಕಳಾದ ಸುಭಾಸ, ಯಲ್ಲಪ್ಪ, ಪ್ರಕಾಶ ಎಂಬುವರೇ ಹಲ್ಲೆ ನಡೆಸಿದ್ದಾರೆ ಎಂದು ಗಾಯಗೊಂಡ ರಮೇಶ ಆರೋಪ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿತರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.
ರಮೇಶನ ಹೊಲಕ್ಕೆ ಹೋಗುವ ದಾರಿಯು ದೊಡ್ಡಪ್ಪನ ಹೊಲಕ್ಕೆ ಅಂಟಿಕೊಂಡು ಇರುವುದೇ ಈ ಘಟನೆಗೆ ಕಾರಣವೆನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಎರಡು ಕುಟುಂಬಗಳ ನಡುವೆ ಜಗಳಗಳಾಗಿದ್ದವು ಎಂದು ಹೇಳಲಾಗಿದೆ.