ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು- ಕೊರೋನಾ ಕರ್ತವ್ಯದಲ್ಲಿದ್ದಾಗ ದುರ್ಘಟನೆ
ಬೆಂಗಳೂರು: ಮಹಾಮಾರಿ ಕೊರೋನಾ ಕರ್ತವ್ಯದಲ್ಲಿದ್ದ ಶಿಕ್ಷಕಿಯೊಬ್ಬರ ಮೇಲೆ ಬಿಎಂಟಿಸಿ ಬಸ್ ಹಾಯ್ದ ಪರಿಣಾಮ ಶಿಕ್ಷಕಿ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಗರದಲ್ಲಿಂದು ಸಂಜೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಶಾಲೆಯ ಟಿಜಿಟಿ ಶಿಕ್ಷಕಿ ವೀಣಾ ಅವರೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೊರೋನಾ ಕರ್ತವ್ಯ ನಿರ್ವಹಣೆಯ ಮೇಲಿದ್ದ ವೀಣಾ ಪತಿಯೊಂದಿಗೆ ಬೈಕ್ ನಲ್ಲಿ ಬಿಬಿಎಂಪಿ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬೈಕ್ ನಿಂದ ಅವರು ಕೆಳಗೆ ಬಿದ್ದರು. ಪತಿ ಎಡಕ್ಕೆ ಬಿದ್ದರೆ, ವೀಣಾ ಬಲಕ್ಕೆ ಬಿದ್ದರು. ಅವರ ಮೇಲೆ ಬಿಎಂಟಿಸಿ ಬಸ್ ಹಾಯ್ದು ಹೋಗಿದೆ.
ವೀಣಾ ಸ್ಥಳದಲ್ಲೇ ಮೃತರಾದರು. ಪತಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ವಿಧಾನಸೌಧದಲ್ಲಿ ಕೆಲಸ ನಿರ್ವಹಿಸುತ್ತಾರೆಂದು ಹೇಳಲಾಗಿದ್ದು, ಮೃತ ವೀಣಾ ಅವರಿಗೆ ಓರ್ವ ಮಗಳಿದ್ದಾಳೆಂದು ಗೊತ್ತಾಗಿದೆ.
ಇಂದು ಶನಿವಾರವಾಗಿದ್ದರಿಂದ ಮಾಹಿತಿಯನ್ನ ಕೊಡುವ ಉದ್ದೇಶದಿಂದ ಬಿಬಿಎಂಪಿಗೆ ಹೋಗುತ್ತಿದ್ದರೆಂದು ಗೊತ್ತಾಗಿದೆ. ಮೃತ ವೀಣಾ ಅವರ ಸಾವಿಗೆ ಟಿಜಿಟಿ ಶಿಕ್ಷಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.