ಶಾಲೆ ಆರಂಭ-ಸಿಎಂ ನಿರ್ಧಾರವೇ ಅಂತಿಮ: ಶಿಕ್ಷಣ ಸಚಿವ ಸುರೇಶಕುಮಾರ
1 min readಬೆಂಗಳೂರು: ರಾಜ್ಯದಲ್ಲಿ ಶಾಲೆಗಳನ್ನು ಸದ್ಯಕ್ಕೆ ತೆರೆಯುವುದಿಲ್ಲ. ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯ ವಿವರಗಳನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗುವುದು. ಶಾಲೆಗಳ ಆರಂಭಕ್ಕೆ ಮುಖ್ಯಮಂತ್ರಿ ಕೈಗೊಳ್ಳುವ ನಿರ್ಧಾರವೇ ಅಂತಿಮ. ಇನ್ನು ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗಿನ ಮಹತ್ವದ ಸಭೆಯ ನಂತರ ಸಚಿವ ಸುರೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸದ್ಯಕ್ಕೆ ಶಾಲೆ ಆರಂಭವಿಲ್ಲ. ಶಾಲೆ ಆರಂಭದ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವಸತಿ ಶಾಲೆಗಳ ಆರಂಭ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎರಡು ದಿನಗಳಲ್ಲಿ ಸಿಎಂ ಗೆ ವರದಿ ನೀಡಲಾಗುವುದು. ಸಿಎಂ ನಿರ್ಧಾರದ ನಂತರ ಶಾಲೆ ಆರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು. ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜೊತೆಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡುವ ಮೊದಲು ಪ್ರಾಂಶುಪಾಲರ ಹುದ್ದೆಗೆ ಪದನ್ನೋತಿ ನೀಡಿ ವರ್ಗಾವಣೆ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಒಟ್ಟಿನಲ್ಲಿ ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ. ಸಿಎಂ ಕೈಗೊಳ್ಳುವ ನಿರ್ಧಾರದ ನಂತರ ಶಾಲೆ ಆರಂಭವಾಗಲಿವೆ. ವರ್ಗಾವಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದು ಸಚಿವ ಸುರೇಶಕುಮಾರ್ ಮಾಹಿತಿ ನೀಡಿದರು.