ನಕಲಿ- ರಿಯಲ್ ಸಿಂಗಂ- ಪಿಎಸೈ ಅಮಾನತ್ತು: ಹಿಂದಿನ ಮಸಲತ್ತೇನು..?
1 min readಕಲಬುರಗಿ: ಸೇನೆಯಲ್ಲಿ ನೂರಾರು ಯೋಧರಿಗೆ ತರಬೇತಿ ನೀಡಿದ್ದ ಯೊಧನೋರ್ವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇರಿಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ, ಅವರನ್ನ ನಕಲಿ ಸಿಂಗಂ ಎಂದು ತೋರಿಸಿ, ಅಮಾನತ್ತು ಮಾಡಿರುವ ಹಿನ್ನೆಲೆಯಲ್ಲಿ ಅದೇನೋ ಷಢ್ಯಂತ್ರ ಅಡಗಿದೆ ಎಂದು ಹೇಳಲಾಗುತ್ತಿದೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೇಲೋಗಿ ಠಾಣೆ ಪಿಎಸ್‌ಐ ಮಲ್ಲಣಗೌಡ ಯಲಗೋಡ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಕಾರಣವಾಗಿದ್ದು, ಸಂತ್ರಸ್ತರ ಜೊತೆ ಥರ್ಮಾಕೂಲ್ ತೆಪ್ಪದ ಮೇಲೆ ಕುಳಿತು ಫೋಸ್ ನೀಡಿದ್ದು ಮತ್ತು ಪ್ರವಾಹ ಪೀಡಿತ ಪ್ರದೇಶದಲ್ಲೇ ತೆಪ್ಪವನ್ನ ಸಂತ್ರಸ್ಥರಿಂದ ತಳ್ಳಿಸಿಕೊಂಡಿದ್ದು.
ಪಿಎಸ್ಐ ಮಲ್ಲಣಗೌಡ ಯಲಗೋಡ, ಸೇನೆಯಲ್ಲಿ ಕಾರ್ಯನಿರ್ವಹಿಸಿ ರಾಜ್ಯದ ಪೊಲೀಸ್ ಇಲಾಖೆಗೆ ಬಂದವರು. ಸೇನೆಯಲ್ಲೂ ಕೂಡಾ ಉತ್ತಮ ಟ್ರೇನರ್ ಆಗಿದ್ದರು. ಸದಾಕಾಲ ನಗು ನಗುತ್ತಲೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಸೇನೆಯಲ್ಲಿದ್ದಾಗಲೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
2015ರ ಬ್ಯಾಚಿನ ಪಿಎಸ್ಐ ಮಲ್ಲಣಗೌಡ ಯಲಗೋಡ, ಉತ್ತಮವಾಗಿ ಹಾಡನ್ನ ಹಾಡ್ತಾರೆ. ಒಳ್ಳೆಯ ಸಿಂಗರ್ ಕೂಡಾ. ನೂರೆಂಟು ಜನರಿಗೆ ಸೇನೆಯಲ್ಲಿ ತರಬೇತಿ ನೀಡಿದ್ದರಿಂದ ವೀಡಿಯೋದ ಮೂಲಕ ಹೊರ ಬಂದಿರುವ ಸಾಹಸಕ್ಕೂ ಹೆಚ್ಚನ್ನೇ ಅವರು ನಿಜ ಜೀವನದಲ್ಲಿ ಮಾಡಿದ್ದಾರೆ ಎನ್ನುವುದು ಅವರನ್ನ ಬಲ್ಲವರು ಹೇಳುತ್ತಾರೆ.
ಆದರೆ, ಈಗ ಹೊರಬಿದ್ದಿರುವ ವೀಡಿಯೋವನ್ನ ಉದ್ದೇಶಪೂರ್ವಕವಾಗಿಯೇ ಕೆಲವರು ಮಾಡಿಸಿ, ಹೊರಗೆ ಹಾಕಿದ್ದಾರೆಂಬುದು ಇಲಾಖೆಯಲ್ಲಿ ಇದೀಗ ಚರ್ಚೆ ಆಗುತ್ತಿರುವುದು.