ಕರ್ನಾಟಕ ಪೊಲೀಸರ ಐತಿಹಾಸಿಕ ಸಾಧನೆಯಲ್ಲಿ ಹುಬ್ಬಳ್ಳಿ ಧಾರವಾಡಿಗರೇ ಹೆಚ್ಚು- DSP ಯಿಂದ HCವರೆಗೆ ‘ಐರನ್ ಮ್ಯಾನ್ಸ್’…
ಗೋವಾದಲ್ಲಿ ನಡೆದ ಐರನ್ಮ್ಯಾನ್ 70.3 ಸ್ಪರ್ಧೆಯಲ್ಲಿ ಕರ್ನಾಟಕ ಪೊಲೀಸ್ ಅಧಿಕಾರಿಗಳ ಸಾಧನೆ
113 ಕಿ.ಮೀ. ಕಠಿಣ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಐವರು ಪೊಲೀಸ್ ಸಿಬ್ಬಂದಿ – ಇಲಾಖೆಗೆ ಹೆಮ್ಮೆ ತಂದ ಸಾಧಕರು
ಗೋವಾ: ಗೋವಾದಲ್ಲಿ ನಡೆದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಐರನ್ಮ್ಯಾನ್ 70.3 (IRONMAN 70.3) ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಐವರು ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡು, ಕಠಿಣ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ಮೊದಲಿಗೆ 1.9 ಕಿಲೋಮೀಟರ್ ಸಮುದ್ರದಲ್ಲಿ ಈಜು, ನಂತರ 90 ಕಿಲೋಮೀಟರ್ ಸೈಕ್ಲಿಂಗ್ ಹಾಗೂ ಕೊನೆಯದಾಗಿ 21.1 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಬೇಕಾಗಿತ್ತು. ಒಟ್ಟು 113 ಕಿಲೋಮೀಟರ್ಗಳ ಈ ಕಠಿಣ ಸವಾಲನ್ನು ಕರ್ನಾಟಕ ಪೊಲೀಸ್ ಇಲಾಖೆಯ ಐವರು ಸಿಬ್ಬಂದಿ ಯಶಸ್ವಿಯಾಗಿ ಎದುರಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದವರು:
- ಭರತ್ ರೆಡ್ಡಿ – ಡಿವೈಎಸ್ಪಿ, ಲೋಕಾಯುಕ್ತ, ಬೆಂಗಳೂರು.
- ಎಂ.ಆರ್. ಚನ್ನಣ್ಣನವರ್ – ಪೊಲೀಸ್ ಇನ್ಸ್ಪೆಕ್ಟರ್, ಹುಬ್ಬಳ್ಳಿ ಗ್ರಾಮಾಂತರ.
- ಸಮೀರ್ ಮುಲ್ಲಾ – ಸಿಪಿಐ, ಕುಂದಗೋಳ.
- ಕಾಳಿಂಗ – ಪೊಲೀಸ್ ಸಬ್ಇನ್ಸ್ಪೆಕ್ಟರ್, ಬಳ್ಳಾರಿ.
- ಕಿರಣ್ ಗಾಣಿಗೇರ – ಹೆಡ್ ಕಾನ್ಸ್ಟೇಬಲ್, ಪೊಲೀಸ್ ಆಯುಕ್ತರ ಕಚೇರಿ, ಹುಬ್ಬಳ್ಳಿ.
ಪೊಲೀಸ್ ಇಲಾಖೆಯ ಕಠಿಣ ಕರ್ತವ್ಯಗಳ ನಡುವೆಯೂ ದೈಹಿಕ ಸಾಮರ್ಥ್ಯ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸವಾಲನ್ನು ಪೂರ್ಣಗೊಳಿಸಿರುವ ಈ ಐವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.
ಕರ್ತವ್ಯದಲ್ಲಿ ಶಿಸ್ತು, ಕ್ರೀಡೆಯಲ್ಲಿ ಸಾಧನೆ ಎಂಬುದನ್ನು ಸಾಬೀತುಪಡಿಸಿರುವ ಕರ್ನಾಟಕ ಪೊಲೀಸ್ ಇಲಾಖೆಯ ಈ ಐವರು ಸಾಧಕರಿಗೆ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
