ಹುಬ್ಬಳ್ಳಿ ಅಮರಗೋಳ KHB ಕಾಲನಿಯ ಭ್ರಷ್ಟಾಚಾರ- ಮನೆ, ಜಾಗ ಪಡೆದವರ ಗೋಳು… 02

ಅಯೋಗ್ಯ ಅಧಿಕಾರಿಗಳ ಕೈಯಲ್ಲಿ ಕಂಗಾಲಾದ ಕೆಎಚ್ಬಿ ಕಾಲನಿಯ ಉದ್ಯಾನವನಗಳು
ಹುಬ್ಬಳ್ಳಿ: ನಗರದ ಅಮರಗೋಳದಲ್ಲಿ ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) 2ನೇ ಹಂತದ ಜಡ್ಜ್ಸ್ ಕಾಲನಿ ನಿರ್ಮಾಣಗೊಂಡು 15 ವರ್ಷ ಕಳೆದರೂ ಇಲ್ಲಿಯವರೆಗೆ ಒಂದೇ ಒಂದು ಸುಸಜ್ಜಿತವಾದ ಉದ್ಯಾನವನ ನಿರ್ಮಿಸಿ ಅಲ್ಲಿಯ ನಿವಾಸಿಗಳಿಗೆ ಮತ್ತು ಪರಿಸರ ಪ್ರೇಮಿಗಳಿಗೆ ನಾಗರಿಕ ಸೌಲಭ್ಯದ ಅನುಕೂಲ ಮಾಡಿಲ್ಲ.
ಸುಮಾರು 109 ಎಕರೆಯಲ್ಲಿ ನಿರ್ಮಾಣಗೊಂಡ ಬಡಾವಣೆಯಲ್ಲಿ ಕನಿಷ್ಠ ಆರು ಸ್ಥಳಗಲ್ಲಿ ಉದ್ಯಾನವನಕ್ಕಾಗಿ ಜಾಗ ಕಾಯ್ದಿರಿಸಲಾಗಿದ್ದರೂ, ಕಳೆದ 15 ವರ್ಷಗಳಿಂದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅಸಡ್ಡೆ ಮನೋಭಾವದಿಂದ ಯಾವುದೊಂದೂ ಉದ್ಯಾನವನದಲ್ಲಿ ಒಂದೇ ಒಂದು ಗಿಡನೆಟ್ಟು ಬೆಳೆಸಿಲ್ಲ! ಆದರೆ, ಪ್ರತಿ ವರ್ಷ ಉದ್ಯಾನವನಗಳ ನಿರ್ವಹಣೆ ಹೆಸರಲಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಹಾಕುವುದನ್ನು ಮಾತ್ರ ಅಧಿಕಾರಿಗಳು ಮರೆತಿಲ್ಲ, ಎಂದು ಕಾಲನಿಯ ನಿವಾಸಿಗಳು ಗಂಭೀರವಾದ ಆರೋಪ ಮಾಡುತ್ತಾರೆ.
“ಸಕಾಲದಲ್ಲಿ ಬಡಾವಣೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದರೇ, ಪಾಲಿಕೆಯವರಾದರೂ ಯಾವುದಾದರು ಒಂದು ಉದ್ಯಾನವನವನ್ನು ಹಸಿರಿನಿಂದ ಕಂಗೊಳಿಸುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಿ, ಪರಿಸರ ಪ್ರೇಮಿಗಳಿಗೆ ಮತ್ತು ಹಿರಿಯರಿಗೆ ವಿಶ್ರಾಂತಿ ಮತ್ತು ವಾಯು ವಿವಾಹರಕ್ಕಾದರೂ ಅನುಕೂಲ ಮಾಡಿಕೊಡುತ್ತಿದ್ದರು” ಎಂದು ಕಾಲನಿಯ ಹಿರಿಯ ನಿವಾಸಿಯಾದ ಶಾಂತವ್ವ ದೊಡ್ಡಮನಿ ಕರ್ನಾಟಕ ವಾಯ್ಸ್.ಕಾಮ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ಬಡಾವಣೆಯಲ್ಲಿ ಮೀಸಲಿಟ್ಟ ಪ್ರತಿಯೊಂದು ಉದ್ಯಾನವು ಸುಮಾರು ಮೂರು ಎಕರೆಯಿಂದ ಐದು ಎಕರೆವರೆಗೆ ವಿಶಾಲಾವಾಗಿದ್ದರೂ ಅವುಗಳ ಅಭಿವೃದ್ಧಿ ಮಾಡುವ ಗೋಜಿಗೆ ಕೆಎಚ್ಬಿ ಅಧಿಕಾರಗಳು ಹೋಗಿಲ್ಲ. ಆದರೆ, ನಿರ್ವಹಣೆ ಹೆಸರಲಿನಲ್ಲಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡುವುದನ್ನು ಮಾತ್ರ ಬಿಟ್ಟಿಲ್ಲ ಎಂದು ನಿರಾವರಿ ಇಲಾಖೆಯ ನಿವೃತ್ತ ಅಧಿಕಾರಿ ಪ್ರವೀಣ ಕುಲಕರ್ಣಿ ಆರೋಪಿಸುತ್ತಾರೆ. “ಉದ್ಯಾನವನಕ್ಕಾಗಿ ಮೀಸಲಿಟ್ಟ ಇಷ್ಟೊಂದು ಜಾಗೆಗಳಲ್ಲಿ ಕನಿಷ್ಟ ಒಂದನ್ನಾದರೂ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುವ ಹಾಗೂ ಬಡಾವಣೆಯ ಅಂದ ಹೆಚ್ಚಿಸುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಬಹುದಾಗಿತ್ತು” ಎಂದು ಅವರು ಹೇಳುವಾಗ ಅವರ ಮಾತಿನಲ್ಲಿ ಕೆಎಚ್ಬಿಯಲ್ಲಿನ ಭ್ರಷ್ಟತೆಯ ಬಗೆಗೆ ಆಕ್ರೋಶವ್ಯಕ್ತವಾಗತೊಡಗಿದೆ.
ಸಾವಿರಾರು ಜನರು ಲಕ್ಷಾಂತರ ರುಪಾಯಿಗಳನ್ನು ನೀಡಿ ಮನೆ ಮತ್ತು ನಿವೇಶನ ಪಡೆದಿರುವ ಬಡಾವಣೆ ನಿವಾಸಿಗಳಿಗೆ, ಮಕ್ಕಳಿಗೆ ಆಟವಾಡಲು, ಹಿರಿಯರಿಗೆ ವಾಯುವಿಹಾರಕ್ಕೆಂದು ಅಥವಾ ವಿಶ್ರಾಂತಿಗೆಂದು ಹೋಗಲು ಯಾವುದೇ ಒಂದು ಉದ್ಯಾನವನ ಇಲ್ಲದಿರುವುದು ಹಾಗೂ ಹಾಳು ಬಿದ್ದ ಉದ್ಯಾನವನಗಳ ಸುತ್ತಲು ಗಿಡಗಂಟಿಗಳು ತುಂಬಿ ತುಳುಕುತ್ತಿರುವದನ್ನು ಕಂಡು ನಿವಾಸಿಗಳು ಎಲ್ಲರು ಸದ್ಯ ಕೆ.ಎಚ್.ಬಿ ಅಧಿಕಾರಗಳಿಗೆ ಹಿಡಿ ಶಾಪಹಾಕುತಿದ್ದಾರೆ. ಗೌರವಾನ್ವಿತ ನ್ಯಾಯಾಧೀಶ ಗೃಹ ವಸತಿಗಳ ಇರುವ ಬಡಾವಣೆಯಲ್ಲೆ ಇಷ್ಟೊಂದು ಗಬ್ಬು ಎಬ್ಬಿಸಿರುವ ಕೆಎಚ್ ಬಿ ಅಧಿಕಾರಿಗಳು ಇನ್ನು ಜನ ಸಾಮಾನ್ಯರ ಬಡಾವಣೆಗಳ ಪರಿಸ್ಥಿತಿ ಹೇಳ ತಿರದು ಎನ್ನುತ್ತಾರೆ ವೀರೇಶ ಪುರಮಾ
“ಬಡಾವಣೆಯಲ್ಲಿ ಕೆಎಚ್ಬಿಯಿಂದ ಅಧಿಕೃತವಾಗಿ ನಾಲ್ಕರಿಂದ ಆರು ಉದ್ಯಾನವನಗಳು ಮಂಜೂರಾಗಿದ್ದು ಅವುಗಳಿಗೆ ಜಾಗೆಗಳು ಕೂಡಾ ಮೀಸಲಿಟ್ಟಿದ್ದರೂ, ಯಾವುದೊಂದು ಉದ್ಯಾನವನಕ್ಕೂ ಮಕ್ಕಳನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ. ಆ ಪಾಳುಬಿದ್ದ ಉದ್ಯಾನಗಳು ಹಾವು ಚೇಳುಗಳ ಆವಾಸಸ್ಥಾನಗಳಾಗಿ ಮಾರ್ಪಟ್ಟಿದ್ದು ಅಡ್ಡಾಡಲು ಹೆದರಿಕೆ ಆಗುತ್ತಿದೆ. ಬೆಳಗ್ಗೆ ಅಥವಾ ಸಾಯಾಂಕಾಲ ವಿಶ್ರಾಂತಿಗಾಗಿ ಎಲ್ಲಾದರೂ ವಿಶ್ರಮೀಸೋಣವೆಂದರೆ ಜಾಗವೇ ಇಲ್ಲದ್ದಂತಾಗಿದೆ ಎಂದು ಕಾಲನಿಯ ಹಿರಿಯರಾದ ಶಿವ್ವಪ್ಪ ಕಮ್ಮಾರ ನೊಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಹಾಗಾದರೆ, ಬಡಾವಣೆ ನಿವಾಸಿಗಳಿಗ ಶುದ್ಧ ವಾತಾವರಣ ನಿರ್ಮಿಸಿಕೊಡಲು ಅಧಿಕಾರಿಗಳಿಂದ ಸಾಧ್ಯವಾಗದೇ ಹೋಗಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಯಾದಂತೆ ಅಲ್ಲವೆ.
“ಪ್ರತಿ ವರ್ಷ ಬಡಾವಣೆಯ ನಿರ್ವಹಣೆ ಹೆಸರಿನಲ್ಲಿ ಟೆಂಡರ್ ಕರೆದಂತೆ ನಾಟಕಮಾಡಿ, ಉದ್ಯಾನ ನಿರ್ವಹಣೆಯ ಟೆಂಡರ್ ಗುತ್ತಿದೆ ಪಡೆಯುವವರ ಜೊತೆ ಶಾಮೀಲಾಗಿ ಕೋಟ್ಯಾಂತಾರ ರುಪಾಯಿಗಳನ್ನು ನುಂಗಿಹಾಕಿರುವ ಕೆ.ಎಚ್.ಬಿ ಅಧಿಕಾರಗಳು ಯಾವುದೇ ಅಬಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಬದಲಾಗಿ ಬಡಾವನೆಯನ್ನು ಹಾಳುಕೊಂಪೆಯನ್ನಾಗಿ ಮಾಡಿದ್ದು, ಮೀಸಲಿಟ್ಟ ಎಲ್ಲ ಉದ್ಯಾನವನಗಳ ಪರಿಸ್ಥಿತಿ ಗಬ್ಬೆದ್ದು ಹೋಗಿದ್ದು, ಅಲ್ಲಿ ಗಿಡ-ಗಂಟಿಗಳು ಬೇಳದಿದ್ದು, ಸದ್ಯ ಅವುಗಳು ನಾಯಿ, ದನ-ಎಮ್ಮೆಗಳ ಅಡ್ಡೆಗಳಾಗಿವೆ. ಉದ್ಯಾನವನಗಳು ಎಲ್ಲಿವೆ ಎಂದು ಹುಡುಕುವ ಪರಿಸ್ಥಿ ಎದುರಾಗಿದೆ ಎಂದು ಕಾಲನಿಯ ನಿವಾಸಿಗಳು ದೂರುತ್ತಾರೆ.
ಈಗಲಾದರೂ ಸಂಬಂಧಿಸಿದ ಮಂತ್ರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಗಳು ಎಚ್ಚೆತ್ತು ಕಳೆದ 10 ವರ್ಷಗಳಲ್ಲಿ ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ, ಹಾಗೂ ಸೇವೆಸಲ್ಲಿಸಿ ನಿವೃತ್ತರಾದ ಮತ್ತು ತಾವು ಮಾಡಿದ ಬಾನಗಡಿಗಳನ್ನು ಇನ್ನೇನು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಹೆದರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ಇಂಜಿನಿಯರಗಳ, ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ. ಅಮರಗೋಳ ಕೆಎಚ್ಬಿ ಬಡಾವಣೆಯ ಅಭಿವೃದ್ಧಿಗೆ ಉಪಯೋಗ ಆಗಬೇಕಿದ್ದ ಕೋಟ್ಯಾಂತರ ರೂಪಾಯಿಗಳನ್ನು ನುಂಗಿ ನೀರು ಕುಡಿದವರ ವಿರುದ್ಧ ತನಿಖೆ ನಡೆಸಬೇಕು ಎಂದು ಬಡಾವಣೆಯ ಹಿತಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ಬರುವ ದಿನಗಳಲ್ಲಿ ಬಡಾವಣೆಯ ಸಮಸ್ಯೆ ಬಗೆಹರಿಯದಿದಲ್ಲಿ ಬೆಂಗಳೂರಿನ ವಿಧಾನಸಭೆಯ ಅರ್ಜಿಗಳ ಸಮಿತಿಗೆ ದೂರು ನೀಡಲು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.