ಜೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ- ‘MB’ ಬರೆಯುವುದಕ್ಕೆ ಹಣ ಕೇಳಿದ್ದರು..!
1 min readಗದಗ: ಸಾಮೂಹಿಕ ಶೌಚಾಲಯದ ಎಂಬಿ ಬರೆಯಲು ಲಂಚವನ್ನ ಕೇಳಿದ್ದ ಜೂನಿಯರ್ ಎಂಜಿನಿಯರ್ 15 ಸಾವಿರ ರೂಪಾಯಿ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿರಹಟ್ಟಿಯಲ್ಲಿ ನಡೆದಿದೆ.
ಶಿರಹಟ್ಟಿಯ ಪಂಚಾಯತ್ ರಾಜ್ ಇಂಜಿನಿಯರಿಂದ ಉಪವಿಭಾಗದಲ್ಲಿ ಜೆಇ ಆಗಿರುವ ಮೀರಾಜುದ್ದೀನ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗದಗ ತಾಲೂಕಿನ ನಸರಾಪೂರ ಗ್ರಾಮದ ಗುತ್ತಿಗೆದಾರ ರವಿಕುಮಾರ ನಿಡಗುಂದಿ, ಗಾಜನೂರು ಗ್ರಾಮದಲ್ಲಿ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದರು.
ಕಾಮಗಾರಿ ಮುಗಿದ ನಂತರ ಕೊಡಬೇಕಾದ ಎಂಬಿಯನ್ನ ಕೊಡಲು 16 ಸಾವಿರ ರೂಪಾಯಿ ಕೇಳಿದ್ದ ಜೆಇ, ಕೊನೆಗೆ 15 ಸಾವಿರಕ್ಕೆ ಒಪ್ಪಿಕೊಂಡಿದ್ದರು. ಹಣಕ್ಕಾಗಿ ಪದೇ ಪದೇ ಸತಾಯಿಸುತ್ತಿದ್ದ ಕಾರಣ ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಡಿಎಸ್ಪಿ ವಾಸುದೇವ ಎನ್.ರಾಮ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಲಂಚ ಸಮೇತ ಜೆಇ ಸಿಕ್ಕಿ ಬಿದ್ದಿದ್ದಾರೆ. ದಾಳಿಯಲ್ಲಿ ಇನ್ಸಪೆಕ್ಟರ್ ವೈ.ಎಸ್.ಧರಣಾನಾಯಕ, ರವೀಂದ್ರ ಕುರಬಗಟ್ಟಿ ಸೇರಿದಂತೆ ಸಿಬ್ಬಂದಿಗಳಾದ ಎಂ.ಎಂ.ಅಯ್ಯನಗೌಡರ, ಆರ್.ಎಚ್.ಹೆಬಸೂರು, ಎಂ.ಎನ್.ಕರಿಗಾರ, ಎನ್.ಎಸ್.ತಾಯಣ್ಣನವರ, ಈರಣ್ಣ ಜಾಲಿಹಾಳ, ವೀರೇಶ ಜೋಳದ, ತಾರಪ್ಪ ಭಾಗವಹಿಸಿದ್ದರು.