Posts Slider

Karnataka Voice

Latest Kannada News

ಅಣ್ಣಿಗೇರಿಯಲ್ಲಿ ಕೋವಿಡ್ ಸೋಂಕಿತರಿಂದ ಮತದಾನ

1 min read
Spread the love

ಹುಬ್ಬಳ್ಳಿ: ಇಂದು ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರು ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು. ಅಣ್ಣಿಗೇರಿ ಪುರಸಭೆಯ ಮತಗಟ್ಟೆ ಸಂಖ್ಯೆ 50 ರಲ್ಲಿ ಇಬ್ಬರು ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಕೋವಿಡ್ ನಿಯಂತ್ರಣದ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಮತ ಚಲಾಯಿಸಿದರು.

ಹೋಂ ಐಸೋಲೇಷನ್ ನಲ್ಲಿದ್ದ ಓರ್ವರು ಹಾಗೂ ಕೋವಿಡ್ ಕೇರ್ ಸೆಂಟರಿನಲ್ಲಿ ಇದ್ದ ಓರ್ವರು ಮತದಾನ ಮಾಡಿದರು. ಇವರು ಮತಗಟ್ಟೆಗೆ ಬಂದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿತ್ತು.  ಮತದಾನದ ನಂತರ ಮತಗಟ್ಟೆಯನ್ನು ಪುನಃ ಸಂಪೂರ್ಣ ಸ್ಯಾನಿಟೈಸ್ ಮಾಡಲಾಯಿತು ಎಂದು ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್. ಎಂ.ಹೊನಕೇರಿ ಹೇಳಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

ಧಾರವಾಡ: ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡು ಇಂದು ನಡೆದ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಶೇ.70.11 ರಷ್ಟು ಮತದಾನ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ ಶೇ.68.65 ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.67.89 ರಷ್ಟು, ಗದಗ ಜಿಲ್ಲೆಯಲ್ಲಿ ಶೇ.74.59 ರಷ್ಟು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.71.08 ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾದಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ 13282 ಪುರುಷ ಮತದಾರರಿದ್ದರೆ ಆ ಪೈಕಿ 9867 ಜನ ಮತದಾನ ಮಾಡಿದ್ದಾರೆ. 8263 ಜನ ಮಹಿಳಾ ಮತದಾರರಿದ್ದರೆ ಆ ಪೈಕಿ 4926 ಜನ ಮತದಾನ ಮಾಡಿದ್ದಾರೆ. ಇತರೆ 4 ಜನ ಮತದಾರರಿದ್ದರೆ ಅವರಾರೂ ಮತದಾನ ಮಾಡಿಲ್ಲ. ಒಟ್ಟು 21549 ಜನ ಮತದಾರರ ಪೈಕಿ 14793 ಜನ ಮತದಾನ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 16220 ಜನ ಪುರುಷ ಮತದಾರರಿದ್ದರೆ ಆ ಪೈಕಿ 11699 ಜನ ಮತದಾನ ಮಾಡಿದ್ದರೆ, 7378 ಮಹಿಳಾ ಮತದಾರರ ಪೈಕಿ 4324 ಜನ ಹಕ್ಕು ಚಲಾಯಿಸಿದ್ದಾರೆ. ಇತರೆ 5 ಜನ ಇದ್ದರೆ ಇವರಾರೂ ಮತದಾನ ಮಾಡಿಲ್ಲ. ಒಟ್ಟಾರೆ 23603 ಜನ ಮತದಾರರ ಪೈಕಿ ಹಾವೇರಿ ಜಿಲ್ಲೆಯಲ್ಲಿ 16023 ಜನ ಮತದಾನ ಮಾಡಿದ್ದಾರೆ.

ಗದಗ ಜಿಲ್ಲೆಯಲ್ಲಿ 10979 ಜನ ಪುರುಷ ಮತದಾರರಿದ್ದರೆ ಆ ಪೈಕಿ 8579 ಜನ ಮತದಾನ ಮಾಡಿದ್ದರೆ, ಒಟ್ಟು 4998 ಜನ ಮಹಿಳಾ ಮತದಾರರ ಪೈಕಿ 3339 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯೂ ಇತರೆ ಒಬ್ಬರು ಮತದಾರರಿದ್ದು, ಅವರೂ ಮತ ಚಲಾವಣೆ ಮಾಡಿಲ್ಲ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 7113 ಜನ ಪುರುಷ ಮತದಾರರಿದ್ದು, ಈ ಪೈಕಿ 5519 ಜನ ಮತದಾನ ಮಾಡಿದ್ದಾರೆ. 6034 ಮಹಿಳಾ ಮತದಾರರ ಪೈಕಿ 3826 ಜನ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಇತರೆ ಒಬ್ಬರು ಮತದಾರರಿದ್ದು, ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಜಿಲ್ಲೆಯ ಒಟ್ಟು 13148 ಮತದಾರರ ಪೈಕಿ 9346 ಜನ ಮತದಾನ ಮಾಡಿದ್ದಾರೆ.

ನಾಲ್ಕೂ ಜಿಲ್ಲೆ ಸೇರಿದಂತೆ 35664 ಜನ ಪುರುಷರು, 16415 ಮಹಿಳಾ ಮತದಾರರು ಹಾಗೂ ಇತರೆ ಒಬ್ಬರು ಸೇರಿದಂತೆ ಒಟ್ಟು 74278 ಮತದಾರರ ಪೈಕಿ 52080 ಮತದಾರರು ಮತದಾನ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed