ಸಚಿವ ಲಾಡ್ ಅವರೇ ನೀವಾದ್ರೂ ಆಸಕ್ತಿ ವಹಿಸಿ- ಬಡ ರೈತರ ಉಳಿಸಿ “50-50” ಏಜೆಂಟರ್‌ನ್ನ ಬಂಧಿಸಿ…!!!
ಧಾರವಾಡ: ದಿನಬೆಳಗಾದರೇ ನೂರೆಂಟು ಬಡ ಕುಟುಂಬಗಳ ಬದುಕು ಕಟ್ಟಿಕೊಡಲು ತುದಿಗಾಲ ಮೇಲೆ ನಿಂತಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೇ, ಸಾವಿರಾರು ಬಡ ರೈತರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನೆ ಕೂರಲು ನಿಜವಾದ ಕಾರಣವೇನಾದರೂ ಇದೇಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿದೆ.
ಬೆಳೆವಿಮೆ ಪರಿಹಾರದಲ್ಲಿ ’50-50′ ದಂಧೆಯ ಕರಾಳತೆ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಶಿಗ್ಗಾಂವ ತಾಲೂಕಿನ ಗಂಜಿಗಟ್ಟಿ, ಪಾಣಿಗಟ್ಡಿ ಮತ್ತೂ ಗದಗ ಮೂಲದ ಪ್ರಮುಖ ಏಜೆಂಟರ್ ಜೊತೆ ಕೆಲ ಶ್ರೀಮಂತ ರೈತರು, ಗ್ರಾಪಂ ಹಾಲಿ, ಮಾಜಿ ಸದಸ್ಯರು ಕೂಡಿಕೊಂಡು ವ್ಯವಸ್ಥಿತವಾಗಿ ಕೋಟಿ ಕೋಟಿ ಹಣವನ್ನ ಕೊಳ್ಳೆ ಹೊಡೆಯುತ್ತಿದ್ದಾರೆ.
ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ನಿರಂತರವಾಗಿ ಮಾಹಿತಿಯನ್ನು ಹೊರ ಹಾಕುತ್ತಿದೆ. ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡ ಬರುತ್ತಿದೆ.
ಕೆಲ ಶ್ರೀಮಂತ ರೈತರು, ಸ್ಥಳೀಯವಾಗಿ ಹಣ ಹೂಡಿದ್ದಾರೆ. ಹುಬ್ಬಳ್ಳಿ ತಾಲೂಕಿನ ಹಳ್ಯಾಳ, ಕಿರೇಸೂರ, ಹೆಬಸೂರ, ಬ್ಯಾಹಟ್ಟಿ, ಶಿರಗುಪ್ಪಿ, ಬಂಡಿವಾಡ, ಮಂಟೂರ, ಧಾರವಾಡ ತಾಲೂಕಿನ ಹಾರೋಬೆಳವಡಿ ಸೇರಿ ಹಲವು ಗ್ರಾಮಗಳು, ಕುಂದಗೋಳ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನಿರಾಂತಕವಾಗಿ ದಂಧೆ ನಡೆದಿದೆ.
ಸಿಎಸ್‌ಸಿ ಕೇಂದ್ರ, ಗ್ರಾಮ ಒನ್ ಕೇಂದ್ರದ ಮೂಲಕವೂ ಫಿಪ್ಟಿ-ಫಿಪ್ಟಿ ದಂಧೆ ನಡೆದಿದೆ. ಮುಂಗಾರು ಹಂಗಾಮಿನ ಹೆಸರು ಬೆಳೆಗೆ ವಿಮೆ ಮಾಡಿಸಿ, ಮೋಸ ಮಾಡಿರುವುದು ಬಹುತೇಕರಿಗೆ ಗೊತ್ತೆಯಿದೆ. ‘ರೈತರಿಗೆ ಅನುಕೂಲ ಅಕೈತಿ’ ಅಂದುಕೊಂಡು ಸುಮ್ಮನೆ ಕೂಡುವ ಬದಲು ಯಾವ ರೈತರಿಗೆ ಅನುಕೂಲ ಆಗಿದೆ ಎಂಬುದನ್ನು ಅರಿತುಕೊಳ್ಳಿ.
ಹಣವಿದ್ದ ಕೆಲ ಶ್ರೀಮಂತ ರೈತರೇ ಪದೇ ಪದೇ ಸರಕಾರದ ಹಣ ಲೂಟಿ ಮಾಡಿರುವುದು ಗೊತ್ತಾಗತ್ತೆ. ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಇನ್ನೂ ಅಷ್ಟೇನೂ ಗಂಭೀರವಾಗ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಹಾಗಾಗಿ, ಸಚಿವ ಸಂತೋಷ ಲಾಡ್ ಅವರಾದರೂ, ಈ ವಿಷಯವನ್ನ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿದೆ.