ಸರಕಾರಿ ಶಾಲೆ ಗೇಟು ಬಿದ್ದು ವಿದ್ಯಾರ್ಥಿ ದುರ್ಮರಣ-ಗೃಹ ಸಚಿವರ ಕ್ಷೇತ್ರದಲ್ಲಿ ಮತ್ತೊಂದು ಅವಘಡ
ಹಾವೇರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಕಬ್ಬಿಣದ ಗೇಟ್ ಗೋಡೆ ಕುಸಿದು ಬಿದ್ದಿದ್ದರಿಂದ ಸಾವಿಗೀಡಾದ ಘಟನೆ ಸವಣೂರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ದಿನಪ್ರತಿಯೂ ಅದೇ ಆವರಣದಲ್ಲಿ ಆಟವಾಡುತ್ತಿದ್ದ 2ನೇ ತರಗತಿಯ ಜೆಲಾನಿ ಹಂಟೆಗಾಲರ ಎಂಬ ಎಂಟು ವರ್ಷದ ಬಾಲಕ ಸಾವಿಗೀಡಾಗಿದ್ದಾನೆ. ಶಾಲೆಯ ಆವರಣದಲ್ಲಿದ್ದ ತಡೆಗೋಡೆ ಮೊದಲು ಕುಸಿದಿದೆ. ತದನಂತರ ಭಾರವಾದ ಕಬ್ಬಿಣದ ಗೇಟ್ ಬಾಲಕನ ಮೇಲೆ ಬಿದ್ದಿದೆ ಎಂದು ಹೇಳಲಾಗಿದೆ.
ಗೇಟ್ ನೇರವಾಗಿ ತಲೆ ಮೇಲೆ ಬಿದ್ದಿದ್ದು, ತಕ್ಷಣವೇ ತೀವ್ರವಾದ ರಕ್ತಸ್ರಾವವಾಗಿದೆ. ಇದರಿಂದ ಗಾಬರಿಯಾಗಿ ಬಾಲಕನನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮುನ್ನವೇ ಮಗು ಸಾವಿಗೀಡಾಗಿದೆ.
ಘಟನಾ ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪೊಲೀಸರ ಸಮೇತ ಬಂದು ಪರಿಶೀಲನೆ ನಡೆಸಿದ್ದು, ತಡೆಗೋಡೆ ಬೀಳಲು ಕಾರಣವೇನು ಎಂಬುದನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಮಗುವಿನ ಕುಟುಂಬದವರಿಗೆ ಸಾಂತ್ವನ ಹೇಳಿ, ಪರಿಹಾರ ಕೊಡಿಸುವ ಮಾತುಗಳನ್ನಾಡಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಮತ್ತೊಂದು ಘಟನೆ ನಡೆದಿರುವುದು ತೀವ್ರ ದುರದೃಷ್ಟಕರ.