ಪ್ರವಾಹದಲ್ಲಿ ಕೊಚ್ಚಿ ಹೋದ ತಹಶೀಲ್ದಾರ-ಪಿಡಿಓ-ಗ್ರಾಮ ಲೆಕ್ಕಾಧಿಕಾರಿ ನೌಕರಿ
ಕಲಬುರಗಿ: ಜಿಲ್ಲೆಯ ಭೀಮಾ ನದಿ ಪ್ರವಾಹದ ವಿಚಾರದಲ್ಲಿ ಕರ್ತವ್ಯ ಲೋಪವೆಸಗಿದ ಗ್ರೇಡ್-2 ತಹಶೀಲ್ದಾರ್ ಪ್ರಭಾಕರ ಖಜೂರೆ ಸೇರಿ ಮೂವರು ಸಿಬ್ಬಂದಿಗಳ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗ್ರೇಡ್-2 ತಹಶೀಲ್ದಾರ ಪ್ರಭಾಕರ ಖಜೂರಿಯವರನ್ನ ಅಫಜಲಪುರ ಪ್ರಕೃತಿ ವಿಕೋಪ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ, ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೇ ಕೇಂದ್ರ ಸ್ಥಾನವನ್ನ ಬಿಟ್ಟು ಹೋಗಿದ್ದು, ಇದೇ ಕಾರಣಕ್ಕೆ ಅವರನ್ನ ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಆಳಂದದ ಗ್ರೇಡ್-1 ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರನ್ನ ಪ್ರಕೃತಿ ವಿಕೋಪ ಕಾರ್ಯಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಅಫಜಲಪುರ ತಹಶೀಲ್ದಾರ ಕಚೇರಿಗೂ ನೇಮಕ ಮಾಡಿದ್ದಾರೆ.
ಇದರ ಜೊತೆಗೆ ಗಾಣಗಾಪುರ ಗ್ರಾಮ ಲೆಕ್ಕಾಧಿಕಾರಿ ಭಾಗೇಶ ಹಾಗು ಪಿಡಿಓ ಗುರುನಾಥ ಹರಿದಾಸ ಅವರನ್ನು ಕೂಡಾ ಅಮಾನತ್ತು ಮಾಡಲಾಗಿದೆ. ಇವರು ಕೂಡಾ ನೆರೆ ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.