ವಿದ್ಯಾಗಮ ಕಾರ್ಯಕ್ರಮ ಪುನರಾರಂಭ: ರೂಪುರೇಷೆ ಸಿದ್ಧತೆ
1 min read
ಬೆಂಗಳೂರು: ಕೊರೋನಾ ಮಹಾಮಾರಿಯಿಂದ ಶಿಕ್ಷಣ ಇಲಾಖೆ ಜರ್ಝರಿತವಾಗುವ ಸಮಯದಲ್ಲೇ ವಿದ್ಯಾಗಮ ಕಾರ್ಯಕ್ರಮ ಸರಕಾರಿ ಶಾಲೆಗಳಿಗೆ ಸಂಜೀವಿನಿಯಂತಾಗಿತ್ತು. ಆದರೆ, ಅದರಿಂದಲೇ ಹಲವು ಶಿಕ್ಷಕರಿಗೆ ಕೊರೋನಾ ಬಂದು ಮೃತಪಟ್ಟ ಬೆನ್ನಲ್ಲೇ ವಿದ್ಯಾಗಮವನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಈಗ ಮತ್ತದನ್ನ ಹೊಸ ರೂಪುರೇಷೆಯೊಂದಿಗೆ ಆರಂಭಿಸಲು ಸರಕಾರ ಸಿದ್ಧತೆಯನ್ನ ನಡೆಸಿದೆ.
ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅಧಿಕಾರಿಗಳಿಗೆ ಟಿಪ್ಪಣೆಯೊಂದನ್ನ ಬರೆದಿದ್ದು, ಆ ಟಿಪ್ಪಣೆಯ ಪ್ರಕಾರ ವಿದ್ಯಾಗಮ ಕಾರ್ಯಕ್ರಮವನ್ನ ಪುನರಾರಂಭಿಸುವ ಬಗ್ಗೆ ರೂಪುರೇಷೆಗಳನ್ನ ಸಿದ್ಧಪಡಿಸಿ ಕಡತದಲ್ಲಿ ಮಂಡಿಸುವಂತೆ ಆದೇಶ ಮಾಡಿದ್ದಾರೆ.
ಇದರ ಜೊತೆಗೆ ಸಿಆರ್ ಪಿ ಮತ್ತು ಬಿಆರ್ ಪಿಗಳಿಗೆ ಈ ಸಾಲಿನ ವರ್ಗಾವಣೆಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕೊಡುವುದು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಕಡ್ಡಾಯ ವರ್ಗಾವಣೆ ಆಗಿದ್ದಲ್ಲಿ ಅವರಿಗೂ ಸಹ ಈ ಬಾರಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಒಟ್ಟು ಆರು ವಿಷಯಗಳನ್ನ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿರುವ ಸಚಿವ ಸುರೇಶಕುಮಾರ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಸ್ಥಗಿತಗೊಂಡಿದ್ದು, ಈ ಸಮಸ್ಯೆಯನ್ನ ಪರಿಹರಿಸಲು ಕೂಡಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನ ಸಲ್ಲಿಸುವಂತೆಯೂ ಆದೇಶ ನೀಡಿದ್ದಾರೆ.