ಕೊರೋನಾಗೆ ಇಬ್ಬರು ಎಎಸ್ಐಗಳು ಸಾವು: ತಲ್ಲಣಗೊಂಡ ಮಾಜಿ ಪ್ರಧಾನಿಯೂರು..!
1 min read
ಹಾಸನ: ಕೊರೋನಾ ಮಹಾಮಾರಿಯ ಆರ್ಭಟ ಕಡಿಮೆಯಾಗುತ್ತಿದೆ ಎಂದುಕೊಂಡಿರುವಾಗಲೇ ಮತ್ತೆ ಕೊರೋನಾ ಹೆಚ್ಚಳವಾಗುತ್ತಿದೇಯಾ ಎಂಬ ಅನುಮಾನ ಬರುವಂತಹ ಘಟನೆ ಮತ್ತೆ ನಡೆದಿದ್ದು, ಕೊರೋನಾಗೆ ಪೊಲೀಸ್ ಇಲಾಖೆಯ ಇಬ್ಬರ ಪ್ರಾಣ ಹೋಗಿದೆ.
ಹಾಸನದ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಬಾಲಕೃಷ್ಣ ಹಾಗೂ ಗೊರೂರು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಇತ್ತೀಚೆಗೆ ಬಡ್ತಿ ಹೊಂದಿ ಎಎಸ್ಐ ಆಗಿದ್ದ ದೊರೆಸ್ವಾಮಿ ಕೊರೋನಾಗೆ ಬಲಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ತಪಾಸಣೆ ಮಾಡಿದಾಗ ಇಬ್ಬರಿಗೂ ಕೊರೋನಾ ಪಾಸಿಟಿವ್ ಇರುವುದು ಖಚಿತವಾಗಿತ್ತು. ಇಬ್ಬರಿಗೂ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಈ ಘಟನೆ ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯನ್ನ ತಲ್ಲಣಗೊಳಿಸಿದ್ದು, ಮತ್ತೆ ಭಯವನ್ನ ಆವರಿಸುವಂತೆ ಮಾಡಿದೆ. ಇಬ್ಬರು ಎಎಸ್ಐಗಳ ಸಾವಿಗೆ ಹಿರಿಯ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.