ಧಾರವಾಡದಲ್ಲಿ ವೃದ್ಧನ ದರೋಡೆ- ಸಾರ್ವಜನಿಕರಿಂದ ಬಿದ್ದವು ಗೂಸಾ- ಸಿಕ್ಕವರೆಲ್ಲಿಯವರು ಗೊತ್ತಾ..?
ಧಾರವಾಡ: ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ ವೃದ್ಧನೋರ್ವನನ್ನ ಆಟೋದಲ್ಲಿ ಕರೆದುಕೊಂಡು ಹೋಗಿ ದರೋಡೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಯುವಕರನ್ನ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಈಗಷ್ಟೇ ನಡೆದಿದೆ.
ಉಪನಗರ ಠಾಣೆ ವ್ಯಾಪ್ತಿಯ ಖಾಸಗಿ ಕಂಪನಿಯ ಬಳಿ ಕರಿಕಟ್ಟಿ ಗ್ರಾಮದ ನಾರಾಯಣ ಅಶೋಕ ಚವ್ಹಾಣ ಎಂಬ 80ರ ಆಸುಪಾಸಿನ ವೃದ್ಧನನ್ನ ಆಟೋದಲ್ಲಿ ಕೂಡಿಸಿಕೊಂಡು, ತಂಪು ಪಾನೀಯದ ಪ್ಯಾಕ್ಟರಿ ಬಳಿ ಆತನ ಬಳಿಯಿದ್ದ ಹಣವನ್ನ ಕಸಿದುಕೊಂಡು, ವೃದ್ಧನಿಗೆ ಥಳಿಸಿದ್ದಾರೆ.
ಹೊಡೆತಕ್ಕೆ ಕೆಳಗೆ ಬಿದ್ದ ವೃದ್ಧನನ್ನ ಸ್ಥಳೀಯರು ನೋಡಿ, ತಾಹೀರ ಸವಾರ ಮತ್ತು ಹಾಜಿಅಲಿ ಎಂಬ ಯುವಕರನ್ನ ಹಿಡಿದು ಕೇಳಿದಾಗ, ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲೇ ಜಮಾಯಿಸಿದ ಹಲವರು ಯುವಕರಿಬ್ಬರಿಗೂ ಹಿಗ್ಗಾ-ಮುಗ್ಗಾ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯುವಕರು ಹೊಡೆದ ಪರಿಣಾಮ ವೃದ್ಧನಿಗೆ ನೋವು ಆರಂಭವಾಗಿದ್ದು, ಆಸ್ಪತ್ರೆಗೆ ಕಳಿಸಲಾಗಿದ್ದು, ದರೋಡೆ ಮಾಡುತ್ತಿದ್ದ ಯುವಕರನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.