Posts Slider

Karnataka Voice

Latest Kannada News

ಬಿಜೆಪಿ ಸೇರುವಂತೆ ವಿನಯ ಕುಲಕರ್ಣಿಗೆ ಚಾಕೋಲೇಟ್ ನೀಡಿದ್ರು: ಹೀಗಂದ ಕಾಂಗ್ರೆಸ್ ಮುಖಂಡ ಯಾರೂ ಗೊತ್ತಾ..?

1 min read
Spread the love

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಸಿಬಿಐನವರು ಕೂಡ ಕಾನೂನು ಬದ್ಧವಾಗಿಯೇ ಕೆಲಸ ಮಾಡುತ್ತಾರೆ. ಕಾನೂನು ಮೀರಿ ಕೆಲಸ ಮಾಡುವುದು ಅವರಿಂದಲೂ ಸಾಧ್ಯವಿಲ್ಲ. ಸಿಬಿಐ ಮೇಲೆ ಏನೇ ಒತ್ತಡಗಳಿದ್ದರೂ ಕಾನೂನು ಬಿಟ್ಟು ಕ್ರಮ ಕೈಗೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ ಎಂಬ ಕುತೂಹಲಕಾರಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊಟ್ಟಿದ್ದಾರೆ.

ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೇಶ್ ಗೌಡ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಇವತ್ತು ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿವಾರಣೆ ನಡೆಸುತ್ತಿದೆ.

ರಾಜಕೀಯವಾಗಿ ವಿನಯ್ ಕುಲಕರ್ಣಿ ಅವರು ಬಹಳಷ್ಟು ಪ್ರಬಲರಾಗಿದ್ದಾರೆ. ಅವರನ್ನು ಹೇಗಾದರೂ ಮಾಡಿ ಅವರನ್ನು ಮಟ್ಟ ಹಾಕಬೇಕೆಂದು ಬಿಜೆಪಿ ನಾಯಕರು ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ. ನಾನು ಆ ಭಾಗದಲ್ಲಿ ಪ್ರವಾಸ ಹೋಗಿದ್ದಾಗ ವಿನಯ್ ಕುಲಕರ್ಣಿ ಅವರು ತಮ್ಮ ಗೋಳನ್ನು ವ್ಯಕ್ತಪಡಿಸಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಈ ಮೊದಲೇ ವಿನಯ್ ಕುಲಕರ್ಣಿ ಅವರ ಬಳಿ ಎಲ್ಲವನ್ನು ಕೇಳಿದ್ದೇನೆ. ಅವರ ಮೇಲೆ ಬಂದಿದ್ದ ಆರೋಪದ ಕುರಿತು ಈಗಾಗಲೇ ತನಿಖೆ ಮಾಡಲಾಗಿದೆ. ಆದರೆ, ಆ ಭಾಗದ ಬಿಜೆಪಿ ನಾಯಕರು ಇಂತಹ ಪ್ರಯತ್ನವನ್ನು ಮಾಡಿಸುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ಸಚಿವ ವಿನಯ್ ಕುಲಕರ್ಣಿ ಅವರನ್ನು ಇನ್ನು ಒಂದಲ್ಲ ಹತ್ತು ಸಾರಿ ಕರೆದು ವಿಚಾರಣೆ ಮಾಡಿ. ಆದರೆ ರಾಜಕೀಯ ಒತ್ತಡಕ್ಕೆ ಒಳಗಾಗಬೇಡಿ. ಸಿಬಿಐ ರಾಜಕೀಯ ಅಸ್ತ್ರವಾಗಬಾರದು. ಯಾವುದು ಶಾಶ್ವತವಲ್ಲ. ಹಿಂದೆ ಸಚಿವರಾಗಿದ್ದ ಕೆಜೆ ಜಾರ್ಜ್‌ ಅವರಿಗೂ ಸಾಕಷ್ಟು ಕಿರುಕುಳ ಕೊಡಲಾಯ್ತು. ಕೊನೆಗೆ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯ್ತು. ಆದರೆ ನಂತರ ಏನಾಯ್ತು? ಅವರಿಗೆ ಪೊಲೀಸರು ಕ್ಲೀನ್ ಚಿಟ್ ಕೊಟ್ಟರು. ಕೋರ್ಟ್‌ನಲ್ಲಿಯೂ ಅವರ ಪರವಾಗಿಯೇ ತೀರ್ಪು ಬಂದಿತು. ಆದರೂ ಮತ್ತೆ ಅವರ ಮೇಲೆ ತನಿಖೆ ಮಾಡಿದ್ದನ್ನೂ ನಾವು ನೋಡಿದ್ದೇವೆ. ಈ ಪ್ರಕರಣ ಕೂಡಾ ಹಾಗೆಯೇ ಇದೆ ಎಂದಿದ್ದಾರೆ.

ರಾಜಕಾರಣದಲ್ಲಿ ಚಕ್ರ ತಿರುಗುತ್ತಲೇ ಇರುತ್ತದೆ. ಹೀಗಾಗಿ ನಾನು ಸಿಬಿಐ ಅಧಿಕಾರಿಗಳ ಬಳಿ ಇಷ್ಟನ್ನು ಮನವಿ ಮಾಡುಕೊಳ್ಳುತ್ತೇನೆ. ನೀವು ವಿಚಾರಣೆ ಮಾಡುವುದು ನಿಮ್ಮ ಕೆಲಸ ಅದನ್ನು ಮಾತ್ರ ಮಾಡಿ. ನಿಮ್ಮ ಕಚೇರಿ ರಾಜಕೀಯದ ಒಂದು ಅಸ್ತ್ರ ಆಗಬಾರದು ಎಂದು ನಾನು ಒತ್ತಾಯ ಮಾಡುತ್ತೇನೆ.

ಈಗ ಸಿಬಿಐ ವಿಚಾರಣೆಯಿಂದ ಬಿಜೆಪಿಯ ಕೆಲವು ನಾಯಕರು ತುಂಬಾ ಖುಷಿಪಡುತ್ತಿದ್ದಾರೆ. ಸದ್ಯ ಖುಷಿ ಪಡಲಿ. ಆದರೆ ನಮಗೆ ದೇಶದ ಕಾನೂನಿನ ಮೇಲೆ ನಂಬಿಕೆಯಿದೆ. ನಮ್ಮ ನಾಯಕರು, ಕಾರ್ಯಕರ್ತರು ಯಾವುದೇ ತಪ್ಪು ಮಾಡಿಲ್ಲ. ಬೇಕು ಅಂತಾನೆ ಚುನಾವಣೆಗೆ ಮೊದಲು ಅಥವಾ ಚುನಾವಣೆ ಮುಗಿದ ಬಳಿಕ ನಮ್ಮ ನಾಯಕರುಗಳನ್ನು ಮುಗಿಸಲಿಕ್ಕೆ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಮತ್ತೊಂದು ಸ್ಪೋಟಕ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಂಚಿಕೊಂಡಿದ್ದಾರೆ. ಒಬ್ಬ ಮಂತ್ರಿಯೆ ವಿನಯ್ ಕುಲಕರ್ಣಿ ಅವರನ್ನು ಚಾಕೊಲೆಟ್ ಕೊಟ್ಟು ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆ. ನಿಮ್ಮ ಪ್ರಕರಣಗಳನ್ನೆಲ್ಲ ಮುಚ್ಚಿಹಾಕುತ್ತೇವೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆ ಮಂತ್ರಿಯೆ ಕರೆದಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದರು.

ಬಿಜೆಪಿಯ ಪ್ರತಿಯೊಬ್ಬ ನಾಯಕನೂ ರಾಜಕೀಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಎಲ್ಲ ತನಿಖಾ ಸಂಸ್ಥೆಗಳು ತಮ್ಮ ಆಸ್ತಿ ಎಂದು ಬಿಜೆಪಿ ನಾಯಕರು ತಿಳಿದು ಕೊಂಡಿದ್ದಾರೆ. ಬೆಂಗಳೂರಿನಲ್ಲಿಯೂ ಹೀಗೆಯೆ ಆಗಿದೆ. ಬೆಂಗಳೂರು ಗಲಭೆ ವಿಚಾರದಲ್ಲಿಯೂ ಹೀಗೆ ರಾಜಕೀಯ ಆರೋಪಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ನಮ್ಮ ಯಾವುದೇ ನಾಯಕರು ತಪ್ಪು ಮಾಡಿಲ್ಲ ಎಂದು ಕೆಜಿ ಹಳ್ಳಿ ಪ್ರಕರಣದ ಕುರಿತು ಮಾತನಾಡಿದ್ದಾರೆ.


Spread the love

Leave a Reply

Your email address will not be published. Required fields are marked *