“ಥಾರ್ OG” ಡೆಲಿವರಿಗಾಗಿ “ಹೂವು-ಸ್ವೀಟ್” ಸಮೇತ ಬಂದ ಗ್ರಾಹಕರಿಗೆ “ವಿಜಯದಶಮಿ ಶಾಕ್”- ಮ್ಯಾನೇಜರ್ ಪರಾರಿ…!!!
ಕಾರು ಬುಕ್ಕಿಂಗ್ ಹಣ ಪಡೆದು ಮ್ಯಾನೇಜರ್ ಪರಾರಿ ಆರೋಪ!
ಬಾಗಲಕೋಟೆ: ದಸರಾ ಹಬ್ಬದ ಶುಭ ಮುಹೂರ್ತದಲ್ಲಿ ಕಾರು ಖರೀದಿಸಲು ಬಂದ ಗ್ರಾಹಕರಿಗೆ ಶಾಕ್ ಎದುರಾಗಿದೆ. ನಗರದ ಮಹೀಂದ್ರಾ ಕಾರು ಶೋರೂಮ್‌ನಲ್ಲಿ ಬುಕ್ಕಿಂಗ್ ಹಾಗೂ ಡೌನ್ ಪೇಮೆಂಟ್ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.
ಮಹೀಂದ್ರಾ ಥಾರ್ ಒಜಿ ಬುಕ್ ಮಾಡಿದ್ದ ಮಾತಿಲಾಲ್ ರಾಥೋಡ್ ಅವರಿಂದ ಸುಮಾರು ₹3.90 ಲಕ್ಷ ಹಣ ಪಡೆದಿರುವ ಆರೋಪವಿದೆ. ಇನ್ನು ಶ್ರೀಶೈಲ ಸುಳಿಕೇರಿ ಹಾಗೂ ಗೋಪಾಲ ರಾಥೋಡ್ ಅವರಿಂದ ತಲಾ ₹21 ಸಾವಿರ ಪಡೆಯಲಾಗಿದೆ.
ಶೋರೂಮ್‌ನ ಬ್ರಾಂಚ್ ಮ್ಯಾನೇಜರ್ ಅಜಿತ್ ಕಲಶೆಟ್ಟಿ ಹಣ ಪಡೆದು, ಕಳೆದ ವಾರವೇ ಕೆಲಸ ಬಿಟ್ಟು ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರು ಡೆಲಿವರಿಗಾಗಿ ಹೂವಿನ ಹಾರ, ಸಿಹಿತಿಂಡಿಯೊಂದಿಗೆ ಬಂದ ಗ್ರಾಹಕರಿಗೆ ನಿರಾಸೆಯಾಗಿದೆ.
ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
