ಶಿಕ್ಷಕರಿಗೂ ಶಿಕ್ಷಣಾಧಿಕಾರಿ ಪದೋನ್ನತಿ ನೀಡಿರಿ-ಅಶೋಕ. ಎಂ.ಸಜ್ಜನ ಆಗ್ರಹ
1 min readಬದಾಮಿ: ಶಿಕ್ಷಕರಿಗೆ ಸೇವಾನುಭವ ಹಾಗೂ ಪದವಿ ಆಧಾರದ ಮೇಲೆ 30 ವರ್ಷ ಸೇವೆ ಸಲ್ಲಿಸಿದವರಿಗೆ ಶೇಕಡಾ 30 ರಷ್ಟು ಶಿಕ್ಷಣಾಧಿಕಾರಿ ಹುದ್ದೆಗೆ ನೇರ ಪದೋನ್ನತಿ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹೇಳಿ, ಸರಕಾರ ಈ ಬಗ್ಗೆ ಗಮನ ನೀಡಬೇಕೆಂದು ಒತ್ತಾಯಿಸಿದರು.
ನಗರದ ಬಸ್ ಸ್ಟ್ಯಾಂಡ್ ಎದುರುಗಡೆ ಇರುವ ಹೋಟೆಲ್ ರಾಜ ಸಂಗಮ ಫಂಕ್ಷನ್ ಹಾಲ್ ನಲ್ಲಿ ಭಾನುವಾರ ದಿನಾಂಕ 22ರಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಬಾಗಲಕೋಟ ಜಿಲ್ಲಾ ಘಟಕದ ಸಹಯೋಗದಲ್ಲಿ ಎಂಟನೇಯ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಸಜ್ಜನ ಮಾತನಾಡಿದರು.
ಗ್ರಾಮೀಣ ಸರಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ಬೇಡಿಕೆಗಳು ಸರ್ಕಾರದ ಹಂತದಲ್ಲಿವೆ. ಗ್ರಾಮೀಣ ಶಿಕ್ಷಕರಿಗೆ ಗ್ರಾಮೀಣ ಪರಿಹಾರ ಭತ್ಯೆ ಕನಿಷ್ಠ 5 ಸಾವಿರ ನೀಡಬೇಕು. ಗ್ರಾಮೀಣ ಪ್ರದೇಶದ ಮುಖ್ಯ ಶಿಕ್ಷಕರಿಗೆ ವಿಶೇಷ ಭತ್ಯೆ ಸ್ಮಾರ್ಟ್ ಫೋನ್ ಕೊಡಬೇಕು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಶಾಲೆ ಆರಂಭಿಸಬೇಕು ಗ್ರಾಮೀಣ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಬೇಕು ಎಂದರು.
ಸರ್ಕಾರಿ ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬದ ಮಕ್ಕಳಿರುವುದರಿಂದ ಇಂತಹ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ ಉಜ್ವಲ ಭವಿಷ್ಯವನ್ನು ರೂಪಿಸಿರೆಂದು ಧಾರವಾಡದ ಅಕ್ಷರ ತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನರವರು ಹೇಳಿದರು.
ವೇದಿಕೆ ಮೇಲೆ ಆಸೀನರಾದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ವೈ. ಸೊರಟಿ ಮಾತನಾಡಿ, ಸರ್ಕಾರಿ ಶಾಲೆಗಳು ಸಮುದಾಯದ ಹೊಣೆಗಾರಿಕೆಯನ್ನು ಹೊಂದಿರುತ್ತವೆ ಹಾಗಾಗಿ ಸರಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರವು ಶಾಲೆಗಳಿಗೆ ಭೌತಿಕ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗುರು ತಿಗಡಿ ಮಾತನಾಡಿ, ಶಿಕ್ಷಕರು ಸಂಘಟಿತರಾದಾಗ ಮಾತ್ರ ಬಹುದಿನಗಳ ಕಾಲ ನೆನೆಗುದಿಗೆ ಬಿದ್ದಿರುವ ವಿವಿಧ ಬೇಡಿಕೆಗಳು ಈಡೇರಲು ಸಾಧ್ಯ. ಹಾಗಾಗಿ ಶಿಕ್ಷಕರ ವಿವಿಧ ಸಂಘಟನೆಗಳು ಒಂದಾಗಬೇಕು ಒಂದಾಗಿ ಪರಿಷತ್ ಮಾದರಿಯಲ್ಲಿ ಎಲ್ಲರೂ ಒಗ್ಗಟಾಗಿರೋಣ ಎಂದು ಮಾರ್ಗದರ್ಶನ ಮಾಡಿದರು.
ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡಪ್ಪ ಕಾಂಬ್ಳೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ತುಂಬಾ ಸಮಸ್ಯೆಗಳಿವೆ ಸರ್ಕಾರವು ನಗರ ಹಾಗೂ ಗ್ರಾಮೀಣ ಶಿಕ್ಷಕರನ್ನು ತಾರತಮ್ಯ ಮಾಡುತ್ತಿದೆ. ಹಾಗಾಗಿ ಗ್ರಾಮೀಣ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಿ ವಿಶೇಷ ಗೌರವ ಭತ್ಯೆಯನ್ನು ನೀಡುವಂತೆ ಹಾಗೂ ಕಾಲಕಾಲಕ್ಕೆ ಶಿಕ್ಷಕರಿಗೆ ಅನುಕೂಲ ಆಗುವಂತೆ ವರ್ಗಾವಣೆ ನಿಯಮಗಳನ್ನು ಜಾರಿಗೆ ತಂದು ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಲೂಸಿ ಸಾಲ್ಡಾನ ರವರು ಬರೆದ ಒಂಟಿ ಪಯಣ ಎಂಬ ಕವನ ಸಂಕಲನವನ್ನು ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ. ಹಿರೇಮಠ ಲೋಕಾರ್ಪಣೆ ಮಾಡಿದರು.
ಅಪ್ನಾದೇಶ ಬಳಗ ದಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಜ್ಯದ ಸಾಧಕರಿಗೆ ರಾಜ್ಯಮಟ್ಟದ “ಶ್ರಮಿಕ ರತ್ನ” ಹಾಗೂ ರಾಜ್ಯ ಕ್ರಿಯಾಶೀಲ ಉತ್ತಮ ಶಿಕ್ಷಕರಿಗೆ “ರಾಜ್ಯ ಶಿಕ್ಷಕ ರತ್ನ” ಎಲ್. ಐ.ಲಕ್ಕಮ್ಮನವರ ಹಾಗೂ ಲೂಸಿ ಸಾಲ್ಡಾನ ಅವರು ನೆರವೇರಿಸಿ ಕೊಟ್ಟರು.
ಅಧ್ಯಕ್ಷರ ಅಪ್ಪಣೆ ಮೇರೆಗೆ ಸಂಘದ ಎಂಟನೆಯ ಕಾರ್ಯಕಾರಣಿ ಸಭೆಗೆ ಸಂಬಂಧಿಸಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಂದಂತಹ ತಾಲ್ಲೂಕ ಜಿಲ್ಲೆಯ ಹಾಗೂ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಸಂಘದ ಅಜೆಂಡಾಗಳನ್ನು ಚರ್ಚಿಸಿ ಸರ್ವಾನುಮತದಿಂದ ಒಮ್ಮತ ಸೂಚಿಸಲಾಯಿತು.
ಗ್ರಾಮೀಣ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ್, ಗ್ರಾಮೀಣ ಪ್ರೌಢಶಾಲೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕಾಡಪ್ಪಾ ಕಾಂಬಳೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಗುರು ತಿಗಡಿ, ಪ.ಜಾತಿ, ಪ.ಪಂಗಡದ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸೊಣ್ಣಪ್ಪ, ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್. ವೈ. ಸೊರಟಿ, ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಲಿಂಗಯ್ಯ ಎಮ್ಮಿಮಠ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಮಲಾಕ್ಷಿ ಗಾಣಿಗೇರ ಹಾಗೂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಉಪ್ಪಿನ್, ಗೌರವಾಧ್ಯಕ್ಷ ಎಲ್. ಐ. ಲಕ್ಕಮ್ಮನವರ, ಕೋಶಾಧ್ಯಕ್ಷ ಎಸ್.ಎಫ್. ಪಾಟೀಲ್, ಕಾರ್ಯಾಧ್ಯಕ್ಷ ಶರಣಪ್ಪಗೌಡ ಆರ್. ಕೆ, ಉಪಾಧ್ಯಕ್ಷ ರಾಮಪ್ಪ ಹಂಡಿ, ಹನುಮಂತಪ್ಪ ಮೇಟಿ, ಐ.ಆರ್. ಹಣಗಿ, ರಾಜ್ಯ ಹಂತದ ವಿವಿಧ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ತಾಲ್ಲೂಕು ಜಿಲ್ಲೆಯ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ವಿವಿಧ ಹಂತದ ಪದಾಧಿಕಾರಿಗಳು ಭಾಗವಹಿಸಿದ್ದರು.
ಮುಖ್ಯಾಂಶಗಳು
1.ಲೂಸಿ ಸಾಲ್ಡಾನ ರವರ “ಒಂಟಿ ಪಯಣ “ಕವನ ಸಂಕಲನ ಪುಸ್ತಕ ಲೋಕಾರ್ಪಣೆ.
2.ವಿವಿಧ ಕ್ಷೇತ್ರಗಳ ಸಾಧಕರಿಗೆ “ಶ್ರಮಿಕ ರತ್ನ” “ರಾಜ್ಯ ಶಿಕ್ಷಕ ರತ್ನ” ಪ್ರಶಸ್ತಿ ಪ್ರದಾನ.
3.ಗ್ರಾಮೀಣ ಶಾಲೆಗಳ ಬಲವರ್ಧನೆಗೆ ಸರ್ಕಾರದಿಂದ ಗ್ರಾಮೀಣ ಶಾಲಾ ಮಕ್ಕಳಿಗೆ “ಲೇಖನ ಸಾಮಗ್ರಿ ” ಶಿಕ್ಷಕರಿಗೆ ಸ್ಮಾರ್ಟ್ ಫೋನ್ ಗಳ ಬೇಡಿಕೆ.
4.ಗ್ರಾಮೀಣ ಶಿಕ್ಷಕರಿಗೆ ತಿಂಗಳಿಗೆ ಕನಿಷ್ಠ 5 ಸಾವಿರ “ಗ್ರಾಮೀಣ ಪರಿಹಾರ ಭತ್ಯೆ” ಬೇಡಿಕೆ
5.ಶಿಕ್ಷಕರಿಗೂ ಶಿಕ್ಷಣಾಧಿಕಾರಿ ಪದೋನ್ನತಿ ನೀಡಿರಿ