ಶಾಸಕರ ದೂರು: ಸಾಬೀತಾದ ಪ್ರಕರಣ- ತಹಶೀಲ್ದಾರ ಅಮಾನತ್ತು

ಚಿಕ್ಕೋಡಿ: ಕೋವಿಡ್ ನಿರ್ವಹಣೆಗೆ ನೀಡಿದ್ದ ಹಣವನ್ನು ದುರ್ಬಳಕೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆಯ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯನ್ನು ಅಮಾನತ್ತುಗೊಳಿಸಲಾಗಿದೆ.
ಕೋವಿಡ್ -19 ನಿರ್ವಹಣೆ ಸಂದರ್ಭದಲ್ಲಿ ಲಕ್ಷಾಂತರ ಹಣ ವೆಚ್ಚ ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಅನುಮೋದನೆ ಪಡೆಯದೆ ಹಣವನ್ನು ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಕುರಿತು ಬೆಳಗಾವಿ ಜಿಲ್ಲೆ ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ ನಿಲುವಳಿ ಸೂಚನೆ ಮಂಡಿಸಿದ್ದರು.
ಹೀಗಾಗಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಚಿಕ್ಕೋಡಿ ಎಸಿ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ತನಿಖಾ ವರದಿಯಲ್ಲಿ ಕರ್ತವ್ಯಲೋಪ ಸಾಬೀತಾದ ಹಿನ್ನಲೆ, ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿಯನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರಾಧಿಕಾರ ಪರವಾನಿಗೆ ಇಲ್ಲದೇ ಹೊರಗಡೆ ಹೋಗದಂತೆಯೂ ತಹಶೀಲ್ದಾರರಿಗೆ ಸೂಚನೆಯನ್ನ ನೀಡಲಾಗಿದೆ. ಶಾಸಕರ ಜಾಗೃತೆಯಿಂದ ಪ್ರಕರಣವೊಂದು ಬಯಲಿಗೆ ಬಂದಂತಾಗಿದೆ.