ನೈತಿಕ ಪೊಲೀಸಗಿರಿ- ವೈರಲ್ ಆಗಿರುವ ಘಟನೆಯ ದೃಶ್ಯಾವಳಿಗಳು
1 min readಮಂಗಳೂರು: ಯುವಕರ ಗುಂಪೊಂದು ಖಾಕಿ ಅಂಗಿ ತೊಟ್ಟಿರುವ ಯುವಕನನ್ನ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ನೊಂದು ವಿಡಿಯೋದಲ್ಲಿ ಆತ ತಾನು ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಳ್ಳುತ್ತಿರುವುದು ಕೂಡಾ ದಾಖಲಾಗಿದೆ.
ಇಂತಹ ನೈತಿಕ ಪೊಲೀಸ್ ಗಿರಿ ಪ್ರಕರಣ ಎಲ್ಲಿ ನಡೆದಿದೆ ಎನ್ನುವುದು ನಿಗೂಢವಾಗಿದ್ದು ಜಿಲ್ಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಘಟನೆಯ ವಿವರ: ಗುಡ್ಡ ಪ್ರದೇಶದಲ್ಲಿ ಯುವಕನ ಮೇಲೆ ಯುವಕರ ತಂಡ ಹಲ್ಲೆ ಕೋಲಿನಿಂದ ಹೊಡೆಯುವ ವಿಡಿಯೋ ಚಿತ್ರೀಕರಿಸಲಾಗಿದ್ದು ಅದರಲ್ಲಿ ತುಳು ಭಾಷೆಯಲ್ಲಿ “ಪೊಣ್ಣು ಬೋಡ ನಿಕ್ಕ್? ರೇಪ್ ಮಲ್ಪುವನ?” ಎಂದು ಪ್ರಶ್ನಿಸಿ ಮುಖ ಮೂತಿ ನೋಡದೆ ಹೊಡೆಯುವುದು ಕೂಡಾ ದಾಖಲಾಗಿದೆ.
ಮತ್ತೊಂದು ವಿಡಿಯೋದಲ್ಲಿ ಯುವಕ ತಾನು ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದೆ. ಮುಟ್ಟಬಾರದ ಜಾಗ ಮುಟ್ಟಿ ಕಿಸ್ ಕೊಟ್ಟೆ, ಈ ವೇಳೆ ಆಕೆ ಬೊಬ್ಬೆ ಹಾಕಿದ್ದರಿಂದ ನಾನು ಓಡಿಹೋದೆ ಎಂದು ಹೇಳುತ್ತಿದ್ದಾನೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಕೆಲವರು ಇದು ಮಂಗಳೂರು ಹೊರವಲಯದ ಬೊಲ್ತೆರ್ ಎಂಬಲ್ಲಿ ನಡೆದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಯುವತಿಯ ಮಾನದ ಮೇಲೆ ಕಣ್ಣು ಹಾಕಿದ್ದ ಕಾಮುಕನಿಗೆ ಹೀಗೆಯೇ ಆಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಆದರೂ ಕಾನೂನು ಕೈಗೆತ್ತಿಕೊಳ್ಳುವ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸಾಮಾಜಿಕ ಸ್ವಾಸ್ಥ್ಯಕ್ಕೆ ಕಂಟಕವಾಗುವವರ ವಿರುದ್ಧ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ.