ಕಿತ್ತು ತಿನ್ನುವ ಬಡತನದ ಕಣ್ಣೀರಿಗೆ ಬೆಳಕಾದ ಪೊಲೀಸ್: ಬದುಕಿಗೆ ದಾರಿ ಮಾಡಿದ ಮೇಧಾವಿ ಆರಕ್ಷಕ
1 min readಉತ್ತರಕನ್ನಡ: ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದ ಕುಟುಂಬವೊಂದಕ್ಕೆ ಮನೆಯಲ್ಲಿ ಕಿತ್ತುತಿನ್ನುವ ಬಡತನವೂ ಕಾಡುತ್ತಿತ್ತು. ಇದೊಂದು ಗುಡಿಸಲು ಕೂಡಾ ಮಳೆಯಲ್ಲಿ ಕುಸಿದು ಬಿದ್ದು ದಿಕ್ಕು ಕಾಣದಂತಾಗಿತ್ತು. ಆದ್ರೆ, ಈಗ ಆ ಕುಟುಂಬಕ್ಕೆ ಬೀಟ್ ಪೊಲೀಸರೋರ್ವರು ಸೂರು ನಿರ್ಮಿಸಿಕೊಡುವುದರಲ್ಲಿ ಶ್ರಮಿಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ ನೆಗ್ಗು ಗ್ರಾಮದಲ್ಲಿ ಅತಿಕ್ರಮ ಜಾಗದಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಗಿರೀಜಾ ಪೂಜಾರಿ ಅತಿಕ್ರಮಣ ಜಾಗದಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದರು. ಆದ್ರೆ, ಇತ್ತಿಚೀಗೆ ಸುರಿದ ಮಳೆಗೆ ಮನೆ ನೆಲಸಮವಾಗಿ ಆ ಕುಟುಂಬ ಬೀದಿ ಪಾಲಾಗುವ ಪರಿಸ್ಥಿತಿ ಎದುರಾಗಿತ್ತು.
ಆಗ ಅವರ ನೆರವಿಗೆ ಬಂದವರೆ ಅಲ್ಲಿನ ಬೀಟ್ ಪೊಲೀಸ್ ರಮೇಶ ಮುಚ್ಚುಂಡಿ. ಯಾವದೋ ಕೆಲಸಕ್ಕಾಗಿ ತನ್ನ ಬೀಟ್‌ಗೆ ಹೋಗಿದ್ದ ರಮೇಶ ಮುಚ್ಚುಂಡಿ ಈ ಕುಟುಂಬದ ಶೋಚನೀಯ ಸ್ಥಿತಿಯನ್ನು ಕಂಡು ಮರಗಿದ್ದಾರೆ. ಕಿತ್ತು ತಿನ್ನುವ ಬಡತನ ಈ ಕುಟುಂಬದ ಮೇಲೆ ಬಿದ್ದು, ಇನ್ನೂ ಜೀವನವನ್ನೆ ನಡೆಸುವುದು ದುಸ್ಸಾಹಸ ಎಂಬಷ್ಟರ ಮಟ್ಟಿಗೆ ಬಂದಿದ್ದಾರೆ. ಇದನ್ನು ಅರಿತ ಬೀಟ್ ಪೊಲೀಸ್ ರಮೇಶ ಮುಚ್ಚುಂಡಿ ಒಂದು ಅದ್ಬುತವನ್ನು ಸೃಷ್ಠಿಸುತ್ತಾರೆ.
ಈ ಕುಟುಂಬಕ್ಕೆ ಏನಾದರೂ ಒಂದು ಸಹಾಯ ಮಾಡಬೇಕು ಎಂಬ ಹಾದಿಯಲ್ಲಿ ಮುತುವರ್ಜಿ ವಹಿಸಿ ಅಲ್ಲಿನ ಗ್ರಾಮ ಪಂಚಾಯತಕ್ಕೆ ಹೋಗಿ ಈ ಕುಟುಂಬಕ್ಕೆ ಸರಕಾರದಿಂದ ಮನೆ ಮಂಜೂರಿ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಆದ್ರೆ, ಅತಿಕ್ರಮಜಾಗ ಆಗಿರೋದ್ರಿಂದ ಪಂಚಾಯತದವರು ಆಶ್ರಯ ಮನೆ ಸಾಧ್ಯ ಇಲ್ಲ ಅಂತಾ ಹೇಳಿ ಕಳುಹಿಸಿದ್ದಾರೆ.
ದೃತಿಗೆಡದ ಸಿಬ್ಬಂದಿ ಗೋಳಿ ಭಾಗದ ಯುವಕರನ್ನು ಸೇರಿಸಿ ಒಂದು ಸಭೆ ಮಾಡಿ ಈ ಕುಟುಂಬದ ದುಃಸ್ಥಿತಿಯನ್ನ ಮನವರಿಕೆ ಮಾಡಿದ್ದಾರೆ. ಈ ಪೊಲೀಸ ಸಿಬ್ಬಂದಿಯ ಮಾತಿಗೆ ಒಪ್ಪಿದ ಕರ್ನಾಟಕ ರಕ್ಷಣಾ ವೇದಿಕೆಯ ಗಜಸೇನೆಯ ಯುವಕರು ಆಕೆಗೆ ಮನೆ ಕಟ್ಟಿಕೊಡುವ ಕಾರ್ಯವನ್ನು ಕೈಗೊಳ್ಳುತ್ತಾರೆ. ಪೊಲೀಸ್ ರಮೇಶ ಮುಚ್ಚುಂಡಿ ಶಿರಸಿ ನಗರದ ಹಲವು ದಾನಿಗಳ ಬಳಿ ಈ ಕುಟುಂಬದ ಸಮಸ್ಯೆ ಹೇಳಿ ಸಹಾಯ ನೀಡುವಂತೆ ಕೇಳಿಕೊಂಡಿದ್ದು, ದಾನಿಗಳು ಸಹ ಒಂದೊಂದು ವಸ್ತುಗಳನ್ನು ದಾನ ರೂಪದಲ್ಲಿ ನೀಡುತ್ತಿದ್ದಾರೆ. ಈ ಪೊಲೀಸ ಸಿಬ್ಬಂದಿಯ ಸಹಾಯದಿಂದಾಗಿ ಮನೆ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಮನೆಯಲ್ಲಿ ನಗು ಅರಳಲಿದೆ.