Posts Slider

Karnataka Voice

Latest Kannada News

ಇನ್ಸಪೆಕ್ಟರ್ ಆಗಿದ್ದಾಗ 25ಸಾವಿರಕ್ಕೆ ಬಾಯಿ ತೆಗೆದ್ರು- ಡಿವೈಎಸ್ಪಿಯಾದಾಗ ಜೈಲು ಪಾಲಾದ್ರೂ: ಉಪ್ಪು ತಿಂದವರು ನೀರು ಕುಡಿಯಲೇಬೇಕು ಮೇಡಂ..!

1 min read
Spread the love

ಕಲಬುರಗಿ: ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕು ಬಿದ್ದಿದ್ದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡಿವೈಎಸ್ಪಿಯೊಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸತ್ರ ನ್ಯಾಯಾಲಯ  ಮಹತ್ವದ ತೀರ್ಪು ನೀಡಿದೆ.

ಶಹಾಬಾದ್ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ವೇಳೆಯಲ್ಲಿ ನಡೆದ ಘಟನೆಗೆ ಡಿವೈಎಸ್ಪಿಯಾಗಿರುವ ವಿಜಯಲಕ್ಷ್ಮೀ ಅವರೇ ಶಿಕ್ಷೆಗೆ ಗುರಿಯಾದವರು. ಸದ್ಯ ಅವರು ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಸಿಆರ್ ಇ ಸೆಲ್)ದಲ್ಲಿ ಡಿವೈಎಸ್ಪಿಯಾಗಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ.ಸತೀಶಸಿಂಗ್ ವಾದ, ಪ್ರತಿವಾದ ಆಲಿಸಿದ ಬಳಿಕ ಆರೋಪ ಸಾಬೀತಾಗಿದ್ದರಿಂದ ಡಿವೈಎಸ್ಪಿ ವಿಜಯಲಕ್ಷ್ಮೀ ಅವರಿಗೆ ಎರಡು ಸೆಕ್ಷನಗಳ ಅಡಿ ಒಂದರಲ್ಲಿ ಮೂರು, ಮತ್ತೊಂದರಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.

2015ರ ಡಿಸೆಂಬರನಲ್ಲಿ ದೇವನ ತೆಗನೂರಿನ ಪೆಟ್ರೋಲ್ ಬಂಕನಲ್ಲಿ ವಾಹನಕ್ಕೆ ಡಿಸೇಲ್ ಹಾಕಿಸಲು ತೆರಳಿದಾಗ ಸಿಬ್ಬಂದಿ ಜತೆ ಜಗಳವಾಡಿದ್ದರಿಂದ ರಾಜು ಎಂಬುವರ ವಿರುದ್ಧ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜುನನ್ನು ಬಂಧಿಸಿ ಟಾಟಾ ಸುಮೋ ಜಪ್ತಿ ಮಾಡಿಕೊಳ್ಳಲಾಗಿತ್ತು.

ನ್ಯಾಯಾಲಯದಿಂದ ಜಾಮೀನು ತಂದ ಬಳಿಕ ವಾಹನ ಬಿಡಿಸಿಕೊಳ್ಳಲು ಶಹಾಬಾದ್ ಠಾಣೆಗೆ ರಾಜು ಬಂದಿದ್ದಾಗ ವಿಜಯಲಕ್ಷ್ಮೀಯವರು 25 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದರು. ಈ ವೇಳೆ ಲೋಕಾಯುಕ್ತರು ದಾಳಿ ನಡೆಸಿದಾಗ ಹಣದ ಸಮೇತ ಸಿಕ್ಕುಬಿದ್ದಿದ್ದರು. ಕಲಬುರಗಿ ಲೋಕಾಯುಕ್ತ ಕಚೇರಿಯಲ್ಲಿ ಕೇಸ್ ದಾಖಲಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಲೋಕಾಯುಕ್ತರ ಪರ ಸರಕಾರಿ ಅಭಿಯೋಜಕ ಅಶೋಕ ಚಾಂದಕವಟೆ ವಾದ ಮಂಡಿಸಿದ್ದರು.

ನ್ಯಾಯಾಧೀಶರು ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಡಿವೈಎಸ್ಪಿ ವಿಜಯಲಕ್ಷ್ಮೀ ಅವರನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಿ, ಕೇಂದ್ರ ಕಾರಾಗೃಹಕ್ಕೆ ಕಳುಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed