Posts Slider

Karnataka Voice

Latest Kannada News

ದೈಹಿಕ ಶಿಕ್ಷಕರ ನ್ಯಾಯಯುತ ಬೇಡಿಕೆಗೆ ಬೆಂಬಲ- ಷಡಾಕ್ಷರಿ

1 min read
Spread the love

ಬೆಂಗಳೂರು: ಪ್ರಾಥಮಿಕ ಶಾಲಾ ಗ್ರೇಡ್ -2 ದೈಹಿಕ ಶಿಕ್ಷಕರ ಬೇಡಿಕೆಗಳು ನ್ಯಾಯಯುತವಾಗಿದ್ದು ಅವುಗಳ ಈಡೇರಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಬೆಂಗಳೂರಿನ ನೌಕರರ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ನೂತನ ರಾಜ್ಯ ಪದಾಧಿಕಾರಿಗಳಿಗೆ ಪ್ರಮಾಣಪತ್ರ, ಗುರುತು ಪತ್ರ ವಿತರಣೆ ಹಾಗೂ ಸಂಘದ ನೂತನ ಲೋಗೋ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಷಡಾಕ್ಷರಿ ಮಾತನಾಡಿದರು.

ವರ್ಗಾವಣಾ ನಿಯಮದಲ್ಲಿ ಬದಲಾವಣೆ,  ನೌಕರರ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಕರಿಗೆ ಅವಕಾಶ, 60 ಮಕ್ಕಳಿರುವ ಶಾಲೆಗೆ ಅಥವಾ ಹಿರಿಯ ಪ್ರಾಥಮಿಕ ಶಾಲೆಗೆ ಒಬ್ಬ ದೈಹಿಕ ಶಿಕ್ಷಕರ ನೇಮಕ, ತೆರವಾದ ದೈಹಿಕ ಶಿಕ್ಷಕರ ಹುದ್ದೆಗಳನ್ನು ಸಹ ಶಿಕ್ಷಕರು ಎಂದು ಬದಲಾಯಿಸದೇ ದೈಹಿಕ ಶಿಕ್ಷಕರಿಗಾಗಿಯೇ ಮೀಸಲಿಡುವುದು, ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓ. ಹುದ್ದೆಗಳಲ್ಲಿ ದೈಹಿಕ ಶಿಕ್ಷಕರಿಗೆ ಅವಕಾಶ ನೀಡುವುದು. ಮುಂತಾದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗ್ರೇಡ್- 1 ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀಪತಿಯವರು ಗ್ರೇಡ್-2 ದೈಹಿಕ ಶಿಕ್ಷಕರ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ, ತಮ್ಮ ಮುಂದಿನ ಯೋಜನೆಗಳನ್ನು ವಿವರಿಸಿ ಸಧ್ಯದಲ್ಲಿಯೇ ರಾಜ್ಯದಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ದೈಹಿಕ ಶಿಕ್ಷಕರಿಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಗ್ರೇಡ್-2 ಸಂಘದ ಜಿಲ್ಲಾಧ್ಯಕ್ಷರಿಗೆ ಗೌರವಾರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಹಾಗೂ ದೈಹಿಕ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಾಧ್ಯಕ್ಷ ಜೆ.ಎಂ.ಆರ್.ಬಸವರಾಜ್ ಸ್ವಾಗತಿಸಿ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಯೋಗೇಶ ಕೊಂಡಾಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಆಶಾಬೇಗಂ ಮುನವಳ್ಳಿ, ಖಜಾಂಚಿ ಲಕ್ಷ್ಮಣ ಮೂರ್ತಿ, ಹಿರಿಯ ಉಪಾಧ್ಯಕ್ಷ ವೆಂಕಟೇಶ ಮೂರ್ತಿ, ಚಂದ್ರಶೇಖರ ಹಾಗೂ ರಾಜ್ಯ ಪದಾಧಿಕಾರಿಗಳು, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಸಂಘದ ನೂತನ ಲೋಗೋವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಗ್ರೇಡ್ 2 ಸಂಘವನ್ನು ರಾಜ್ಯ ಸರ್ಕಾರಿ ನೌಕರರ ಸಂಘದೊಂದಿಗೆ ಸಂಯೋಜನೆಗೊಳಿಸಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.


Spread the love

Leave a Reply

Your email address will not be published. Required fields are marked *

You may have missed