ನವಲಗುಂದದ ರೈತ ಪರವೂರಿನ ಹೊಲದಲ್ಲಿ ಶವವಾಗಿ ಪತ್ತೆ

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಶಾನವಾಡ- ಹಾಳಕುಸುಗಲ್ ರಸ್ತೆಯ ಮಧ್ಯದಲ್ಲಿರುವ ಹೊಲವೊಂದರಲ್ಲಿ ನವಲಗುಂದ ಪಟ್ಟಣದ ರೈತನೋರ್ವನ ಶವ ಪತ್ತೆಯಾಗಿದ್ದು, ಯಾವ ಕಾರಣಕ್ಕೆ ಹೀಗಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ನವಲಗುಂದ ಪಟ್ಟಣದ ಚೌಕಿ ಹತ್ತಿರವಿರುವ ಗೌಡರ ಓಣಿಯ ಫಕ್ಕೀರಪ್ಪ ಯಲ್ಲಪ್ಪ ಹೆಗ್ಗಣ್ಣನವರ ಎಂಬ ರೈತನ ಶವ ದೊರಕಿದ್ದು, ಯಾವುದೇ ರೀತಿಯ ಗಾಯಗಳು ದೇಹದ ಮೇಲೆ ಇರದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹುಲುಸಾಗಿ ಬೆಳೆದಿರುವ ಗೋದಿಯ ಹೊಲದಲ್ಲಿ ಮಲಗಿರುವಂತೆ ಕಾಣುವ ಹಾಗೇ ಶವವಾಗಿರುವ ಫಕ್ಕೀರಪ್ಪ, ಎಷ್ಟು ಗಂಟೆಗೆ ಮನೆಯಿಂದ ಹೊರ ಹೋಗಿದ್ದರೆಂಬುದನ್ನ ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಹೋಗಿದ್ದ ನವಲಗುಂದ ಠಾಣೆಯ ಪೊಲೀಸರು, ಶವವನ್ನ ತಾಲೂಕು ಆಸ್ಪತ್ರೆಗೆ ತಂದಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.