ನವಲಗುಂದದಲ್ಲಿ ಮಿರ್ಚಿ-ಬಜ್ಜಿ ಜಗಳ: ಕಾದ ಎಣ್ಣೆಯಿಂದ ಒಬ್ಬ ಆಸ್ಪತ್ರೆಗೆ ದಾಖಲು
ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಕಳೆದ 20 ವರ್ಷದಿಂದ ಮಿರ್ಚಿ-ಬಜ್ಜಿ ಅಂಗಡಿಯನ್ನ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನ ಥಳಿಸಲು ಹೋಗಿ ಆತನ ಮೇಲೆ ಬಿಸಿಯಾದ ಎಣ್ಣೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಪಟ್ಟಣದ ಕನ್ನಡ ಶಾಲೆಯ ಹತ್ತಿರ ಹಲವು ವರ್ಷಗಳಿಂದಲೂ ಮಿರ್ಚಿ-ಬಜ್ಜಿ ಮಾರಾಟ ಮಾಡುತ್ತಿದ್ದ ಶೌಕತಲಿ ಅಬ್ದುಲಗಣಿ ಇಂಜಿನಿಯರ್ ಎಂಬಾತನ ಮೇಲೆಯೇ ಕಾದ ಎಣ್ಣೆ ಬಿದ್ದಿದ್ದು, ಹೊಟ್ಟೆ ಮತ್ತು ಎದೆ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ.
ಶೌಕತಲಿ ಹಲವು ವರ್ಷಗಳಿಂದ ನಡೆಸುತ್ತಿದ್ದ ಅಂಗಡಿಯ ಪಕ್ಕದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ರಿಯಾಜ ಕಲೆಗಾರ ಎಂಬಾತ, ಮಿರ್ಚಿ-ಬಜ್ಜಿ ಅಂಗಡಿ ತೆಗೆಯಲು ಮುಂದಾಗಿದ್ದಾನೆ. ಇದನ್ನ ವಿರೋಧ ಮಾಡಿದ ಹಿನ್ನೆಲೆಯಲ್ಲಿ ರಿಯಾಜ ತನ್ನ ಸಹೋದರಿ ಮತ್ತು ತಾಯಿಯೊಂದಿಗೆ ಹೊಡೆದಾಡುತ್ತ ಎಣ್ಣೆಯ ಮೇಲೆ ದೂಡಿದ್ದಾನೆ. ಅಷ್ಟಾರಲ್ಲಾಗಲೇ ಕಾದಿದ್ದ ಎಣ್ಣೆ, ಶೌಕತಲಿಯ ದೇಹಕ್ಕೆ ತಾಗಿ, ಗಾಯಗೊಂಡಿದ್ದಾನೆ.
ತಕ್ಷಣವೇ ಗಾಯಗೊಂಡವನನ್ನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೂವರ ವಿರುದ್ಧ ದೂರು ಪಡೆದಿರುವ ಪೊಲೀಸರು ವಿಚಾರಣೆಯನ್ನ ಮಾಡುತ್ತಿದ್ದಾರೆ.