ಕೆಟಗೇರಿ ಬರುವ ಮುನ್ನವೇ ಊರು ಬಿಟ್ಟ ನರೇಂದ್ರ ಪಂಚಾಯತಿ ಮೆಂಬರ್ಸ: ಬಂದ ಮೇಲೆ ಪಶ್ಚಾತಾಪ..!
1 min readಧಾರವಾಡ: 26ರಲ್ಲಿ 22 ಜನ ಬಿಜೆಪಿ ಬೆಂಬಲಿತರು ಎಂದು ಬೀಗಿದ್ದ ನರೇಂದ್ರ ಪಂಚಾಯತಿಯ 15 ಸದಸ್ಯರು ಸೋಮವಾರ ರಾತ್ರಿ ಯಿಂದ ಕಾಣೆಯಾಗಿದ್ದಾರೆ. ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗುವ ಮೊದಲೇ ಸೋಮವಾರ ರಾತ್ರಿ ಊರು ಬಿಟ್ಟಿದ್ದಾರೆ. ಬಿಜೆಪಿ ಬೆಂಬಲಿತರನ್ನು ಒಳಗೊಂಡ ಈ ತಂಡ ತೀರ್ಥಕ್ಷೇತ್ರಗಳಿಗೆ ತೆರಳಿದೆ ಎಂದು ಹೇಳಲಾಗಿದೆ.
ಆತ್ಮಾನಂದ ಹುಂಬೇರಿ, ಅಪ್ಪಣ್ಣ ಹಡಪದ, ಬಸವರಾಜ ಪಮ್ಮಣ್ಣವರ, ಅರ್ಜುನಗೌಡ, ನಾಗರಾಜ ಹಟ್ಟಿಹೊಳಿ, ರಾಯನಗೌಡ ಪಾಟೀಲ, ಸಂಗಪ್ಪ ಆಯಟ್ಟಿ, ಮುತ್ತು ಕೆಲಗೇರಿ, ತಿರಕಯ್ಯ ಹಿರೇಮಠ, ಶಂಕ್ರವ್ವ ಹಡಪದ, ಮಲ್ಲವ್ವ ವಾಲೀಕಾರ, ಕಲ್ಲವ್ವ ಖಾನಾಪುರ, ಲಕ್ಷ್ಮೀ ಶಿಂಧೆ, ಶಾಂತವ್ವ ಮಲ್ಲನಗೌಡ ಪಾಟೀಲ, ಶಾಂತವ್ವ ಬಸನಗೌಡ ಪಾಟೀಲ ಪ್ರವಾಸ ಕೈಗೊಂಡವರು.
ಊರು ಬಿಟ್ಟಿರುವ ಈ ತಂಡದಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳಾ, ಬ ವರ್ಗ ಪುರುಷ ಮತ್ತು ಬ ಮಹಿಳಾ, ಎಸ್ಸಿ, ಎಸ್ಟಿ, ಅ ವರ್ಗ ಪುರುಷ ಮತ್ತು ಅ ಮಹಿಳಾ ಸದಸ್ಯರಿದ್ದಾರೆ. ಯಾವುದೇ ಮೀಸಲಾತಿ ಬಂದರೂ ತಂಡದ ಇಬ್ಬರನ್ನು ಅಧ್ಯಕ್ಷ- ಉಪಾಧ್ಯಕ್ಷ ಎಂದು ತೀರ್ಮಾನಿಸಿಕೊಂಡು ನೇರವಾಗಿ ಮತದಾನದ ದಿನದಂದು ಮರಳಲು ನಿರ್ಧರಿಸಿ ಹೋಗಿದ್ದಾರೆ ಎನ್ನಲಾಗಿದೆ. ಆದರೆ ಅಧ್ಯಕ್ಷ ಮೀಸಲಾತಿ ಬ ವರ್ಗ ಪುರುಷ ಅಥವಾ ಸಾಮಾನ್ಯ ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಅ ವರ್ಗ ಮಹಿಳೆ ಮೀಸಲಾತಿ ಬಂದಿರುವುದು ಈ ತಂಡದ ಪುರುಷ ಸದಸ್ಯರಿಗೆ ಬಿಸಿ ತುಪ್ಪವಾಗಿದೆ. ಇತ್ತ ಗ್ರಾಮದಲ್ಲಿ ಉಳಿದಿರುವವರು ಒಳಗೊಳಗೇ ತಂತ್ರ ರೂಪಿಸುತ್ತಿದ್ದಾರೆ.
ಉಪಾಧ್ಯಕ್ಷಗೆ ಹೆಚ್ಚಿದ ಪೈಪೋಟಿ:
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಬಂದಿರುವುದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಪ್ರವಾಸ ಕೈಗೊಂಡಿರುವವರ ಪೈಕಿ ಆತ್ಮಾನಂದ ಹುಂಬೇರಿ, ಸಂಗಪ್ಪ ಆಯಟ್ಟಿ, ತಿರಕಯ್ಯ ಪೂಜಾರ, ರಾಯನಗೌಡ ಪಾಟೀಲ, ನಾಗರಾಜ ಹಟ್ಟಿಹೊಳಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಈ ಐವರಲ್ಲಿ ಒಮ್ಮತ ಮೂಡಿಸಲು ಪ್ರವಾಸ ಆಯೋಜಿಸಿರುವ ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಇತ್ತ ಪ್ರವಾಸ ಹೋದವರಿಗೆ ಸ್ಪರ್ಧೆಯೊಡ್ಡಲು ಉಳಿದ ಸದಸ್ಯರು ಒಗ್ಗಟ್ಟಾಗುವ ಸಾಧ್ಯತೆ ಇದೆ. ಒಟ್ಟಾರೆ ಚುನಾವಣೆ ಮುಗಿದಾಗಿನಿಂದ ನರೇಂದ್ರ ಪಂಚಾಯತಿಯಲ್ಲಿ ದಿನಕ್ಕೊಂದು ಘಟನಾವಳಿಗಳು ನಡೆಯತ್ತಿದ್ದು, ಅಧ್ಯಕ್ಷ- ಉಪಾಧ್ಯಕ್ಷ ಯಾರಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.