ಚಿನ್ನದ ವ್ಯಾಪಾರಿ ಪುತ್ರನ ಹತ್ಯೆ: 24 ಗಂಟೆಯಲ್ಲೇ ಪೊಲೀಸರ ಕಾರ್ಯಾಚರಣೆ

ಯಾದಗಿರಿ: ಚಿನ್ನದ ಆಸೆಗಾಗಿ ಹಾಡುಹಗಲೇ ಚಿನ್ನದ ಉದ್ಯಮಿಯ ಪುತ್ರನನ್ನ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಜಿಲ್ಲೆಯ ಹುಣಸಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿನ್ನದ ವ್ಯಾಪಾರಿ ಜಗದೀಶ ಅವರ ಪುತ್ರ ನರೇಂದ್ರ ಶಿರವಿ ಎಂಬಾತನನ್ನ ದುಷ್ಕರ್ಮಿಗಳು ಹತ್ಯೆ ಮಾಡಿ ಒಂದು ಕೆಜಿ ಬಂಗಾರ, ಎರಡು ಕೆಜಿ ಬೆಳ್ಳಿ ಆಭರಣಗಳನ್ನ ದೋಚಿಕೊಂಡು ಪರಾರಿಯಾಗಿದ್ದರೆಂದು ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡಗಳನ್ನ ರಚನೆ ಮಾಡಿದ ಬೆನ್ನಲ್ಲೇ ಹುಣಸಗಿ ಇನ್ಸಪೆಕ್ಟರ್ ದೌಲತ್ ಎನ್.ಕೆ ತಂಡ ಇಬ್ಬರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನ ರಾಜಸ್ಥಾನದ ಕಿಶೋರ ಕಲ್ಯಾಣಬನ್ ಗೋಸ್ವಾಮಿ ಹಾಗೂ ಮಹಾರಾಷ್ಟ್ರದ ಅಜಿತ ನಾನಾಸೋ ಚೌಗಲೆ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಒಂದು ಕೆಜಿ 500 ಗ್ರಾಂ ಬಂಗಾರದ ಆಭರಣಗಳು, 10 ಕೆಜಿ 500 ಗ್ರಾಂ ಬೆಳ್ಳಿಯ ಆಭರಣಗಳು, ಬೈಕ್ ಹಾಗೂ ಕೊಲೆ ಮಾಡಲು ಬಳಕೆ ಮಾಡಿದ್ದ ಚಾಕುವನ್ನ ವಶಕ್ಕೆ ಪಡೆಯಲಾಗಿದೆ.
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಕೇಶ ಸೋನಾವಣೆ ಮಾರ್ಗದರ್ಶನದಲ್ಲಿ ಸುರಪುರ ಉಪಅಧೀಕ್ಷಕ ವೆಂಕಟೇಶ, ಹುಣಸಗಿ ಸಿಪಿಐ ದೌಲತ್ ಎನ್.ಕೆ, ಪಿಎಸ್ಐ ಬಾಪುಗೌಡ ಪಾಟೀಲ, ಕೊಡೇಕಲ್ ಪೊಲೀಸ್ ಠಾಣೆಯ ಪಿಎಸ್ಐ ಬಾಷುಮಿಯಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಬ್ಬಂದಿಗಳಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.