ತಾಯಿಗಾಗಿ ಬೈಕ್ ತೆಗೆದುಕೊಂಡ ದರ್ಶನ ಇನ್ನಿಲ್ಲ: ಮಗನ ನೋಡಿ ತಂದೆಯೂ ಸಾವು..

ಹುಬ್ಬಳ್ಳಿ: ತನ್ನ ತಾಯಿ ಬಸ್, ಟೆಂಪೋದಲ್ಲಿ ಸಂಚರಿಸುವುದು ಬೇಡವೆಂದು ಬೈಕ್ ಖರೀದಿಸಿದ್ದ ಯುವಕನೋರ್ವ ತಾಯಿಯನ್ನ ಕರೆದುಕೊಂಡು ಬರಲು ಬೈಕ್ ತೆಗೆದುಕೊಂಡು ಹೋದಾಗ, ದುರ್ಘಟನೆ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಇಂದು ಸಾವಿಗೀಡಾಗಿದ್ದಾನೆ.
ದೀಪಾವಳಿ ದಿನವೇ ಬೆಳಗಾವಿಯ ಯಮನಾಪುರ ಬ್ರಿಡ್ಜ್ ಬಳಿ ತನ್ನ ತಾಯಿಯನ್ನು ಕರೆದುಕೊಂಡು ಬರಲು ಹೋದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದರ್ಶನ ಬಸವರಾಜ ಕರಗುಪ್ಪಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದ. ಬೆಳಗಾವಿಯ ಕಾಕತಿ ನಿವಾಸಿಯಾಗಿರುವ ದರ್ಶನ, ತನ್ನ ತಾಯಿಯನ್ನು ಕೆಲಸದಿಂದ ಕರೆದುಕೊಂಡು ಬರಲು ಮತ್ತು ಬಿಡಲು ಕಳೆದ 1 ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬೈಕ್ ತೆಗೆದುಕೊಂಡಿದ್ದನು..
ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗನ ಸ್ಥಿತಿಯನ್ನ ಕಂಡು ಕಳೆದ ಹತ್ತು ದಿನಗಳ ಹಿಂದೆ ದರ್ಶನ ತಂದೆ ಬಸವರಾಜ ಕೂಡಾ ಸಾವಿಗೀಡಾಗಿದ್ದಾನೆ. ಇದೀಗ ಮಗನದ್ದು ದುರಂತ ಅಂತ್ಯವಾಗಿದ್ದು, ತಾಯಿಗೆ ಆಕಾಶವೇ ಮೇಲೆ ಬಿದ್ದಂತಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನ ಹುಬ್ಬಳ್ಳಿಯ ಕಿಮ್ಸ ಶವಾಗಾರದಲ್ಲಿಡಲಾಗಿದ್ದು, ಕೆಲವು ಸಮಯದ ನಂತರ ಶವ ದರ್ಶನ ಹುಟ್ಟೂರಿಗೆ ತೆರಳಲಿದೆ.