ನಕಲಿ ಸೇನಾಧಿಕಾರಿ ಮಾಡಿಕೊಂಡ ಮದುವೆಗಳೇಷ್ಟು ಗೊತ್ತಾ..! ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದವರು ನೋಡಲೇಬೇಕಾದ ಮಾಹಿತಿಯಿದು..!
1 min readಬೆಳಗಾವಿ: ತಾನೊಬ್ಬ ಸೇನಾಧಿಕಾರಿ ಅಂತಾ ಹೇಳಿಕೊಂಡು ಬರೋಬ್ಬರಿ ಐದು ಮದುವೆಯಾಗಿದ್ದ ಮಹಾ ಚಪಲ ಚೆನ್ನಿಗರಾಯನನ್ನ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಈತ ಮಾಡಿದ ರಾದ್ಧಾಂತ ಬಯಲಾಗಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲವತವಾಡ ಗ್ರಾಮದ ಮಂಜುನಾಥ ಬಿರಾದಾರ್ ಎಂಬಾತನೇ ಈ ಚಪಲ ಚೆನ್ನಿಗರಾಯ. 37 ವಯಸ್ಸಿನ ಈತ ಐದಕ್ಕೂ ಹೆಚ್ಚು ಮದುವೆ ಮಾಡಿಕೊಂಡಿದ್ದು, 10ಕ್ಕೂ ಹೆಚ್ಚು ಹುತಾತ್ಮ ಯೋಧರ ಕುಟುಂಬಗಳಿಗೆ ಮೋಸ ಮಾಡಿದ್ದಾನೆ.
ತಾನೊಬ್ಬ ಅನಾಥ, ತನಗೆ ಯಾರೂ ಇಲ್ಲ. ಸೇನೆಯಲ್ಲಿ ಸುಬೇದಾರ್ ಆಗಿದ್ದೇನೆ, ಮೇಜರ್ ಆಗಿದ್ದೇನೆ ಎಂದು ಬೆಳಗಾವಿ-ಬಾಗಲಕೋಟೆ ಸೇರಿ ವಿವಿಧ ಜಿಲ್ಲೆಗಳ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದ. ನಕಲಿ ಐಡಿ ಕಾರ್ಡ್, ಸಮವಸ್ತ್ರ ಧರಿಸಿ ಗ್ರಾಮಕ್ಕೆ ಎಂಟ್ರಿ ಕೊಟ್ಟು, ಗ್ರಾಮದ ಮುಖಂಡರನ್ನು ನಂಬಿಸಿ ತಾನು ಮದುವೆಯಾಗಬೇಕು. ಯುವತಿಯನ್ನು ಹುಡುಕುತ್ತಿದ್ದೀನಿ ಅಂತಾ ಹೇಳಿ ಮದುವೆ ಆಗುತ್ತಿದ್ದ. ಮದುವೆಯಾದ ಒಂದು ತಿಂಗಳು ಹೆಂಡತಿಯ ಮನೆಯಲ್ಲಿದ್ದು, ಚಕ್ಕಂದವಾಡಿ ಎಸ್ಕೇಪ್ ಆಗುತ್ತಿದ್ದ.
ಮಿಲಿಟರಿ ಅಧಿಕಾರಿ ಎಂದು ನಂಬಿಸಿ ಐದಕ್ಕೂ ಹೆಚ್ಚು ಮದುವೆಯಾಗಿದ್ದ ಈ ಮಂಜುನಾಥ, ಸೇನೆಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರನ್ನೇ ಟಾರ್ಗೇಟ್ ಮಾಡುತ್ತಿದ್ದ. ಹುತಾತ್ಮ ಯೋಧರ ಊರುಗಳಿಗೆ ತೆರಳಿ ಯೋಧರಿಗೊಂದು ನಮನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಮಾಡಿ, ಹುತಾತ್ಮ ಯೋಧರ ಕುಟುಂಬವನ್ನ ಸನ್ಮಾನಿಸುತ್ತಿದ್ದ. ಒನ್ RANK ಒನ್ ಪೆನ್ಷನ್ ಯೋಜನೆಯಡಿ ವಿಧವಾ ಪಿಂಚಣಿ ಮಾಡಿಸಿಕೊಡ್ತೀನಿ ಎಂದು ಹೇಳಿ, ಹುತಾತ್ಮ ಯೋಧರ ಪತ್ನಿಯರಿಂದ ಹಣ ವಸೂಲಿ ಮಾಡುತ್ತಿದ್ದ ಈತನನ್ನು ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 21 ರಂದು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಮಿಲಿಟರಿ ಏರಿಯಾದಲ್ಲಿ ಮಿಲಿಟರಿ ಸಮವಸ್ತ್ರ ಹಾಕಿಕೊಂಡು ಸಂಶಯಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ ಈತನನ್ನು ಗಮನಿಸಿದ್ದ ಕರ್ತವ್ಯ ನಿರತ ಮಿಲಿಟರಿ ಅಧಿಕಾರಿಗಳು, ಆತನನ್ನು ಹಿಡಿದು ವಿಚಾರಿಸಿದಾಗ ಯಾವುದೇ ಐಡಿ ಕಾರ್ಡ್ ತೋರಿಸಿಲ್ಲ. ಆಗ ಆರೋಪಿ ಮಂಜುನಾಥ್ ಪಾಟೀಲ್‌ನನ್ನು ಹಿಡಿದು ಕ್ಯಾಂಪ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಈತನ ದುಷ್ಕೃತ್ಯ ಬಯಲಾಗಿದೆ. ಭಾರತೀಯ ಸೇನೆಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕ್ಯಾಂಪ್ ಠಾಣೆ ಪೊಲೀಸರು, ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿಯ ಕ್ರೈಂ ವಿಭಾಗದ ಡಿಸಿಪಿ ವಿಕ್ರಂ ಆಮ್ಟೆ, ಪ್ರಾಥಮಿಕ ಮಾಹಿತಿ ಪ್ರಕಾರ ಐದು ಜನರನ್ನು ಮದುವೆಯಾಗಿದ್ದಾನೆ. ಮದುವೆಯಾಗಲು ಹಲವು ಮನೆಗಳಿಗೆ ಹೋಗಿ ಹುಡುಗಿಯರನ್ನು ನೋಡಿಕೊಂಡು ಬಂದ ಮಾಹಿತಿ ಇದೆ.
ಈತನ ವಿರುದ್ಧ ವಿಜಯಪುರ, ಇಂಡಿ, ಸೂರತ್ಕಲ್, ರಾಯಚೂರು ಜಿಲ್ಲೆಯ ಮಸ್ಕಿ, ಲಿಂಗಸಗೂರಿನಲ್ಲಿ ಒಟ್ಟು ಐದು ಕೇಸ್ ದಾಖಲಾಗಿವೆ. ಹಲವು ಜನ ಈತನಿಂದ ಮೋಸ ಹೋಗಿದ್ದರ ಬಗ್ಗೆ ಮಾಹಿತಿ ಕಲೆಹಾಕಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.