ನನ್ನ ಹೆಂಡತಿನ್ನ ಮೆಂಬರ್ ಮಾಡಿ, ನಾನು 25 ಲಕ್ಷ ದೇಣಿಗೆ ಕೊಡ್ತೇನಿ: ತಹಶೀಲ್ದಾರ ರಾಜಕೀಯ ಹುಚ್ಚು..
1 min readಮಂಡ್ಯ: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಹಲವು ರೀತಿಯಲ್ಲಿ ಸದ್ದು ಮಾಡುತ್ತಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ ಇದೂ ಇನ್ನಷ್ಟು ಭಿನ್ನವಾಗಿ ಗೋಚರವಾಗಿದ್ದು, ತಹಶೀಲ್ದಾರರೊಬ್ಬರು ತಮ್ಮ ಹೆಂಡತಿಯನ್ನ ಅವಿರೋಧವಾಗಿ ಆಯ್ಕೆ ಮಾಡಿದ್ರೇ 25 ಲಕ್ಷ ರೂಪಾಯಿ ಹಣವನ್ನ ದೇಣಿಗೆ ನೀಡಲು ಮುಂದೆ ಬಂದಿರುವ ಘಟನೆ ಹೊರ ಬಂದಿದೆ.
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಚಲಿಂಗನದೊಡ್ಡಿ ಗ್ರಾಮದ ಮುಖಂಡರ ಸಮ್ಮುಖದಲ್ಲಿಯೇ ತಹಶೀಲ್ದಾರರೊಬ್ಬರು 25 ಲಕ್ಷ ರೂಪಾಯಿಯನ್ನ ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ಕೊಡುವುದಾಗಿ ಹೇಳಿದ್ದು, ಎಲ್ಲ ಕಡೆಯೂ ಸದ್ದು ಮಾಡಿದೆ.
ಈ ಸುದ್ದಿಯ ಜಾಡು ಪತ್ತೆ ಹಚ್ಚಲು ಗ್ರಾಮಕ್ಕೆ ಪೊಲೀಸರು ಹೋದಾಗ, ಗ್ರಾಮಸ್ಥರು ಬೇರೆ ತೆರನಾಗಿ ಹೇಳಿಕೆ ನೀಡಿದ್ದಾರೆ. ತಹಶೀಲ್ದಾರರಿಗೆ ಚುನಾವಣೆ ನಿಲ್ಲಬೇಕೆಂಬ ಬಯಕೆ ಇರಲಿಲ್ಲ. ನಾವೇ ಗ್ರಾಮಸ್ಥರು ಕೂಡಿಕೊಂಡು ಮನವಿ ಮಾಡಿಕೊಂಡಿದ್ದೇವೆ. ಹಾಗಾಗಿಯೇ ಅವರು ಒಪ್ಪಿಕೊಂಡು ದೇವಸ್ಥಾನ ನಿರ್ಮಾಣಕ್ಕೆ ಒಂದೂವರೆ ಗುಂಟೆ ಜಾಗೆಯನ್ನ ಕೊಡುವುದಾಗಿ ಹೇಳಿದ್ದಾರೆನ್ನುವುದನ್ನ ಗ್ರಾಮಸ್ಥರು ದೃಢಿಕರಿಸಿದ್ದಾರೆ.
ಒಟ್ಟಾರೆ, ಗ್ರಾಮ ಪಂಚಾಯತಿ ಚುನಾವಣೆ ಸಾಕಷ್ಟು ಸದ್ದು ಮಾಡುತ್ತಿದ್ದು, ಒಂದು ಕಡೆ ಹರಾಜು ಮೂಲಕ ಸ್ಥಾನ ಪಡೆಯುತ್ತಿದ್ದರೇ ಇನ್ನೊಂದೆಡೆ ಬೇರೆಯದ್ದೇ ಆಮಿಷಗಳನ್ನೊಡ್ಡಿ ಮೆಂಬರ್ ಆಗುವ ಪ್ರಯತ್ನ ಮಾಡುತ್ತಿದ್ದಾರೆ.