ಕೊರೋನಾಗೆ ಮತ್ತೋರ್ವ ಹವಾಲ್ದಾರ ಸಾವು: ತಂದೆ ಕಳೆದುಕೊಂಡ ಮಗ
ಚಾಮರಾಜನಗರ: ಕಳೆದ ಹನ್ನೊಂದು ದಿನದ ಹಿಂದೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಪೇದೆಯೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸುರೇಶ್ ಎಂಬಾತರೇ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಆಗಷ್ಟ್ 14 ರಂದು ಕೊರೋನಾ ಪಾಸಿಟಿವ್ ದೃಡಪಟ್ಟು, ಚಿಕಿತ್ಸೆಗಾಗಿ ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಮೃತ ಹವಾಲ್ದಾರ ಸುರೇಶ್ ಮೂಲತಃ ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದವರು. ಮೃತರು ಓರ್ವ ಪುತ್ರ, ಪತ್ನಿಯನ್ನ ಅಗಲಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಇದುವರೆಗೆ ಮೂವರು ಪೊಲೀಸ್ ಸಿಬ್ಬಂದಿಗಳು ಕೊರೋನಾದಿಂದ ಸಾವಿಗೀಡಾದಂತಾಗಿದೆ.