ಸಿಗದ ರಜೆ ವಿಷ ಕುಡಿದ ಹೆಡ್ ಕಾನ್ ಸ್ಟೇಬಲ್- ಪೊಲೀಸ್ ಕುಟುಂಬದ ಸ್ಥಿತಿ ಅಯೋಮಯ: ಎಕ್ಸಕ್ಲೂಸಿವ್ ವೀಡಿಯೋ
1 min readಕಲಬುರಗಿ: ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆಯೋರ್ವರು ಕೆಲಸದಿಂದ ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಸೇಡಂ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ವಿಷ ಸೇವಿಸಿದ್ದ ಮುಖ್ಯ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇಡಂ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರವಿ ಎಂಬ ಮುಖ್ಯಪೇದೆ ಬಿಡುವಿಲ್ಲದೇ ಕರ್ತವ್ಯ ನಿರ್ವಹಣೆ ಮಾಡಿದ್ದರು. ಬುಧವಾರ ಚುನಾವಣೆಯ ಕರ್ತವ್ಯವನ್ನೂ ನಿರ್ವಹಣೆ ಮಾಡಿ, ಮೇಲಾಧಿಕಾರಿಗಳಿಗೆ ರಜೆಯನ್ನ ಕೇಳಿದ್ದಾರೆ. ತಕ್ಷಣವೇ ರಜೆ ಕೊಡೋಕೆ ಆಗಲ್ಲ ಎಂಬ ಉತ್ತರ ಬಂದ ತಕ್ಷಣವೇ ರವಿಯವರು, ವಿಷ ಸೇವಿಸಿ ಸಾವಿಗೆ ಪ್ರಯತ್ನಿಸಿದ್ದಾರೆ.
ತಕ್ಷಣವೇ ರವಿಯವರನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಘಟನೆಯ ಬಗ್ಗೆ ರವಿ ಅವರ ಪತ್ನಿ ಆಸ್ಪತ್ರೆಗೆ ಬಂದ ಹಿರಿಯ ಅಧಿಕಾರಿಗಳಿಗೆ ತಮ್ಮ ನೋವನ್ನ ಹೇಳಿಕೊಂಡ ವೀಡಿಯೋ ವೈರಲ್ ಆಗಿದ್ದು, ಪೊಲೀಸರ ಕುಟುಂಬಗಳ ಸ್ಥಿತಿ ಅನಾವರಣಗೊಂಡಿದೆ. ವ್ಯವಸ್ಥೆಯಲ್ಲಿನ ಕುಟುಂಬಗಳನ್ನ ಚೆನ್ನಾಗಿಡಲು ಪರಿತಪಿಸುವ ಪೊಲೀಸರ ಕುಟುಂಬಗಳ ನೋವು ಈ ಮೂಲಕ ಹೊರಜಗತ್ತಿಗೆ ಗೊತ್ತಾಗಿದೆ.