ಗ್ರಾಮೀಣ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ_ ಅಷ್ಟೋಳ್ಳೆ ಕಾರ್ಯಕ್ರಮದಲ್ಲಿ ಏನೇನು ನಡೀತು ಗೊತ್ತಾ..?
ಬೆಂಗಳೂರು: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಹುಬ್ಬಳ್ಳಿ ರಾಜ್ಯ ಘಟಕದಡಿಯಲ್ಲಿ ಸ್ಥಾಪನೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ಹಾಗೂ ಹೊಸಕೋಟೆ ತಾಲೂಕು ಘಟಕದ ಸರ್ವ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸರಳವಾಗಿ ಹೊಸಕೋಟೆ ಕೆಪಿಎಸ್ ಶಾಲಾ ಆವರಣದಲ್ಲಿ ನಡೆಯಿತು.
ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಶಿಕ್ಷಕರಿಗೆ, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರಿಗೆ, ಹೊಸದಾಗಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಿಗೆ ಸತ್ಕರಿಸಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಕೆ.ವಿ. ಶ್ರೀಕಾಂತ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ ರಚಿಸಲು ಉಸ್ತುವಾರಿ ವಹಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಆರ್.ನಾರಾಯಣಸ್ವಾಮಿ ಚಿಂತಾಮಣಿ ಭಾಗವಹಿಸಿ ಗ್ರಾಮೀಣ ಶಿಕ್ಷಕರ ಸಂಘದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ರಾಜ್ಯ ಪದಾಧಿಕಾರಿ ಟಿ.ಸೊಣ್ಣಪ್ಪ ಗ್ರಾಮೀಣ ಶಿಕ್ಷಕರ ಸಂಘದ ಗುರಿ ಮತ್ತು ಹೋರಾಟಗಳ ಬಗ್ಗೆ ವಿವರಿಸಿದರು. ಹೊಸಕೋಟೆ ತಾಲೂಕು ಅಧ್ಯಕ್ಷ ಅಣ್ಣಯ್ಯಪ್ಪ, ಗ್ರಾಮೀಣ ಶಿಕ್ಷಕರ ಹಿತಕ್ಕಾಗಿ ಎಲ್ಲರ ಸಹಕಾರ ಕೋರಿದರು. ರಾಜ್ಯ ಸಂಘಟನಾಶೀಲ ಗಂಗಾಧರಯ್ಯ, ಸುಕುಮಾರ್ ಗ್ರಾಮೀಣ ಶಿಕ್ಷಕರ ಸಂಘಕ್ಕೆ ಹಾರೈಸಿದರು.
ಸಮಾರಂಭದ ನಿರೂಪಣೆ ಭಾರತಿ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಪಿ. ವೆಂಕಟೇಶ್ ವಂದಿಸಿದರು.