ಗ್ರಾ.ಪಂ ಚುನಾವಣೆ ಮೆಂಬರ್ ಸ್ಥಾನ ಹರಾಜು: 13ಜನರ ಮೇಲೆ FIR
1 min readಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರಿನಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 13 ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು 13 ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ಆರೋಪ ಸಾಬೀತಾಗಿ ಅವರು ಶಿಕ್ಷೆಗೆ ಒಳಗಾದರೆ, ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಕೇವಲ ಎಫ್ಐಆರ್ ದಾಖಲಾಗಿದ್ದರೆ ಮಾತ್ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರಲಿದೆ. ಒಂದು ವೇಳೆ ಆರೋಪಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಆರೋಪ ಸಾಬೀತಾದರೆ ಅವರ ಸದಸ್ಯತ್ವ ಅನೂರ್ಜಿತವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಒಟ್ಟು ಒಂಬತ್ತು ಸ್ಥಾನಗಳಿಗೆ ಹರಾಜು ಹಾಕಿ ಲಕ್ಷಾಂತರ ರೂಪಾಯಿಗಳನ್ನ ಸಂಗ್ರಹ ಮಾಡಲಾಗಿತ್ತು. ಹರಾಜು ಪ್ರಕ್ರಿಯೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾಮ ಪಂಚಾಯತಿ ಎಲ್ಲ ಸ್ಥಾನಗಳಿಗೂ ಬೇರೆ ಬೇರೆ ರೀತಿಯ ದರದಲ್ಲಿ ಹರಾಜು ಮಾಡಲಾಗಿತ್ತು.