Posts Slider

Karnataka Voice

Latest Kannada News

ತಹಶೀಲ್ದಾರ್, ಪಿಡಿಓ ಸೇರಿ ಧಾರವಾಡ ಜಿಲ್ಲೆಯಲ್ಲಿ ’97 ಪೋಸ್ಟ್’ ಖಾಲಿ ಖಾಲಿ….!!!

Spread the love

ಕಂದಾಯ ಇಲಾಖೆ ನೌಕರರ ಕುಂದು ಕೊರತೆ ಸಭೆ
ಅಧಿಕಾರಿ ಸಿಬ್ಬಂದಿಗಳಿಗೆ ಕಾಲಮಿತಿಯಲ್ಲಿ ಪದೊನ್ನತಿ, ಸರಕಾರಿ ಸೌಲಭ್ಯ ನೀಡಲು ಬದ್ಧ; ಸರಕಾರ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಕಂದಾಯ ಇಲಾಖೆ ಕೊಂಡಿ; ವೃತ್ತಿಯಲ್ಲಿ ಬದ್ಧತೆ ಇರಲಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ: ಕಂದಾಯ ಇಲಾಖೆ ಸರಕಾರದ ಪ್ರಮುಖ ಮತ್ತು ದೊಡ್ಡ ಇಲಾಖೆ. ಸರಕಾರದ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಈ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಅರ್ಹತೆ ಆಧಾರದಲ್ಲಿ ಪದೋನ್ನತಿ, ಸರಕಾರಿ ಸೌಲಭ್ಯಗಳನ್ನು ನೀಡಲು ಜಿಲ್ಲಾಡಳಿತ ಬದ್ಧವಾಗಿದೆ. ಪ್ರತಿಯೊಬ್ಬರು ಅವರವರ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಕಂದಾಯ ನೌಕರರ ಕುಂದುಕೊರತೆ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬರು ಅಗತ್ಯಕ್ಕೆ ಅನುಗುಣವಾಗಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು. ಇದು ಕಂದಾಯ ಇಲಾಖೆಗೆ ಹೆಚ್ಚು ಅನ್ವಯಿಸುತ್ತದೆ. ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಮತ್ತು ಬಾಕಿ ಇರುವ ಬಡ್ತಿಗಳನ್ನು ನಿಯಮಾನುಸಾರ ನೀಡಲು ಕ್ರಮಕೈಗೊಳ್ಳುತ್ತೇವೆ. ಮುಂದಿನ 15 ದಿನಗಳಲ್ಲಿ ಎಲ್ಲ ತಹಶೀಲ್ದಾರರು ಆಯಾ ತಾಲೂಕುಮಟ್ಟದಲ್ಲಿ ಕಂದಾಯ ನೌಕರರ ಸಭೆ ಜರುಗಿಸಿ, ವಿವರವಾದ ವರದಿಯೊಂದಿಗೆ ಬಡ್ತಿ, ಆರ್ಥಿಕ ಸೌಲಭ್ಯ, ಕಚೇರಿ ನಿವೇಶನ, ಕಟ್ಟಡ, ಸಿಬ್ಬಂದಿ ವಸತಿ ಗೃಹ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿಗಳ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಗ್ರೇಡ್-1 ತಹಶೀಲ್ದಾರ 5 ಹುದ್ದೆಗಳಿದ್ದು ಖಾಲಿ ಇವೆ, ಗ್ರೇಡ್-2 ತಹಶೀಲ್ದಾರ 1 ಹುದ್ದೆ ಖಾಲಿ ಇದೆ, ಪ್ರ.ದ.ಸ 2, ದ್ವಿ.ದ.ಸ 18, ಗ್ರಾಮ ಆಡಳಿತ ಅಧಿಕಾರಿ 31, ಶೀಘ್ರಲಿಪಿಗಾರ 9, ವಾಹನ ಚಾಲಕ 8, ಡಿ ಗ್ರೂಪ್ 23 ಹುದ್ದೆಗಳು ಖಾಲಿ ಇವೆ. ಒಟ್ಟು 541 ಹುದ್ದೆಗಳ ಪೈಕಿ 444 ಹುದ್ದೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 97 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಸರಕಾರ ಹಾಗೂ ಜಿಲ್ಲಾಡಳಿತದಿಂದ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ನಗರ, ಮಹಾನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಇಲಾಖೆ ಭೂಮಿಯಿದೆ. ಹಳೆ ಹುಬ್ಬಳ್ಳಿ ಸೇರಿದಂತೆ ಕೆಲವು ಕಡೆಗಳಲ್ಲಿ ಕಂದಾಯ ಇಲಾಖೆ ಭೂಮಿ ಒತ್ತುವರಿ ಆಗಿದೆ. ಎಲ್ಲ ತಹಶೀಲ್ದಾರರು ತಮ್ಮ ತಾಲೂಕು ವ್ಯಾಪ್ತಿಗಳಲ್ಲಿರುವ ಕಂದಾಯ ಇಲಾಖೆ ಭೂಮಿಯನ್ನು ಗುರುತಿಸಿ, ಅಳತೆ ಮಾಡಿಸಬೇಕು. ಒತ್ತುವರಿ ಆಗಿದ್ದರೆ ಪೊಲೀಸ್ ಬಂದೊಬಸ್ತದಲ್ಲಿ ತೆರವುಗೊಳಿಸಬೇಕು. ಗುರುತು ಕಲ್ಲು ಹಾಕಿ ಸಂರಕ್ಷಿಸಬೇಕು. ಈ ಭೂಮಿಯನ್ನು ಕಂದಾಯ ಇಲಾಖೆ ಕಚೇರಿ ಕಟ್ಟಡ, ಸಿಬ್ಬಂದಿ, ಅಧಿಕಾರಿಗಳಿಗೆ ವಸತಿಗೃಹ ನಿರ್ಮಿಸಲು ಮೀಸಲಿಡಬೇಕು. ಈ ಕುರಿತು ತುರ್ತು ಕ್ರಮವಹಿಸಿ ತಹಶೀಲ್ದಾರರು ವರದಿ ಸಲ್ಲಿಸಬೇಕು. ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ಅವರು ಸೂಚಿಸಿದರು.

ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ಆಯಾ ಗ್ರಾಮದಲ್ಲಿ ಹಾಗೂ ಕಂದಾಯ ನಿರೀಕ್ಷಕರಿಗೆ ಹೋಬಳಿ ಮಟ್ಟದಲ್ಲಿ ಸುಸಜ್ಜಿತ ಕಟ್ಟಡ ಹೊಂದಲು ಅನುವು ಆಗುವಂತೆ ಕಟ್ಟಡ ನಕ್ಷೆಯೊಂದಿಗೆ ಅಗತ್ಯ ದಾಖಲೆಗಳನ್ನು ತಹಶೀಲ್ದಾರರು ಸಲ್ಲಿಸಿದಲ್ಲಿ, ಸಮಗ್ರವರದಿಯೊಂದಿಗೆ ಸರಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಲಾಗುವುದು ಮತ್ತು ಸರಕಾರ, ಜನಪ್ರತಿನಿಧಿಗಳ ಸಹಕಾರದಿಂದ ಕಟ್ಟಡ ಪ್ರಾರಂಭಿಸಲು ಯೋಜನೆ ರೂಪಿಸಲಾಗುವುದು ಎಂದು ಅವರು ಹೇಳಿದರು.

ಸಾರ್ವಜನಿಕರಿಗೆ ನೀಡುವ ಸೇವೆಯಲ್ಲಿ ವಿಳಂಬವಾಗಬಾರದು. ಎಲ್ಲ ಅಧಿಕಾರಿ, ಸಿಬ್ಬಂದಿಗಳು ತೃಪ್ತಿ ಮತ್ತು ಸಂತೋಷದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ವೃತ್ತಿಯಲ್ಲಿ ನಿಧಾನತೆ, ಪಕ್ಷಪಾತ, ಭ್ರಷ್ಟತೆ, ನಿಯಮಬಾಹಿರ ವರ್ತನೆಗಳನ್ನು ಸಹಿಸುವುದಿಲ್ಲ. ಅಂತಹ ದೂರುಗಳು ಬಂದಲ್ಲಿ ಪರಿಶೀಲಿಸಿ, ಸತ್ಯಾಂಶ ವಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಯಾವುದೇ ವ್ಯಕ್ತಿ ಅಥವಾ ಗುಂಪು ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ವಿನಾಕಾರಣ ತೊಂದರೆ ಅಥವಾ ಕಾನೂನುಬಾಹಿರ ಕೃತ್ಯಕ್ಕೆ ಒತ್ತಡ, ಪ್ರೇರಣೆ, ಹಲ್ಲೆ ಅಂತಹ ಘಟನೆಗೆ ಕ್ರಮವಹಿಸಿದಾಗ ಪೊಲೀಸ್ ರಕ್ಷಣೆ ನೀಡಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಹಾಗೂ ಮಹಾನಗರ ಪೊಲೀಸ್ ಆಯುಕ್ತರಿಗೆ ಈಗಾಗಲೇ ತಿಳಿಸಲಾಗಿದೆ. ಎಲ್ಲರೂ ಮುಕ್ತವಾಗಿ, ನಿಯಮ ಪ್ರಕಾರ ಕರ್ತವ್ಯ ನಿರ್ವಹಿಸುವ ವಾತಾವರಣ ಎಲ್ಲ ಕಚೇರಿಗಳಲ್ಲೂ ಇರಬೇಕು. ಈ ಕುರಿತು ಆಯಾ ತಹಶಿಲ್ದಾರರು ನಿಗಾ ವಹಿಸಿ, ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವಂತೆ ಮುಂಜಾಗ್ರತೆ ವಹಿಸಬೇಕೆಂದು ತಿಳಿಸಿದರು.

ವೇದಿಕೆಯಲ್ಲಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಧಿಕಾರಿ ಶಾಲಂ ಹುಸೇನ್ ಅವರು ಮಾತನಾಡಿದರು.

ಕಂದಾಯ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ ಹಟ್ಟಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಚಿನ ಮಳಗಿ ಸ್ವಾಗತಿಸಿದರು. ಖಜಾಂಚಿ ನಾಸೀರ್ ಅಮರಗೋಳ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಆನಂದ ನಾಯಕ ವಂದಿಸಿದರು.

ಕಂದಾಯ ನೌಕರರ ಪರವಾಗಿ ಮಲ್ಲಿಕಾರ್ಜುನ ಸೊಲಗಿ, ಮಹೇಶ ನಾಗವ್ವನವರ, ಪ್ರವೀಣ ಕುಲಕರ್ಣಿ ಸಾರಂಗಿ ಸೇರಿದಂತೆ ಇತರರು ಮಾತನಾಡಿದರು.

ಸಭೆಯಲ್ಲಿ ಎಲ್ಲ ತಾಲೂಕುಗಳ ತಹಶೀಲ್ದಾರರು, ಉಪ ತಹಶೀಲ್ದಾರರು, ಶಿರಸ್ತೆದಾರರು, ಜಿಲ್ಲಾ ಕಂದಾಯ ನೌಕರರ ಸಂಘ, ವಿವಿಧ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘಗಳ ಸದಸ್ಯರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *