ಧಾರವಾಡ ಜಿಲ್ಲಾ ಪತ್ರಕರ್ತರ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಪತ್ರಿಕೋದ್ಯಮದಲ್ಲಿನ ಗುಣಮಟ್ಟ ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2019-20ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವೀಡಿಯೋಗಳಿಗೆ ಈ ಬಾರಿ ಒಟ್ಟು 9ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿ ವಿಭಾಗಗಳು ಈ ರೀತಿ ಇವೆ.
1) ಹುಬ್ಬಳ್ಳಿ- ಧಾರವಾಡ ಅವಳಿ ನಗರ ವ್ಯಾಪ್ತಿಯ ಒಂದು ಅತ್ಯುತ್ತಮ ವರದಿ (ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.)
2) ಧಾರವಾಡ ಜಿಲ್ಲಾ ಗ್ರಾಮೀಣ ಪ್ರದೇಶ ವ್ಯಾಪ್ತಿಯ ಒಂದು ಅತ್ಯುತ್ತಮ ವರದಿ
3) ಅತ್ಯುತ್ತಮ ಲೇಖನ (ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.) (ಲೇಖನ ವಿಷಯಕ್ಕೆ ಪ್ರದೇಶ ವ್ಯಾಪ್ತಿ ಇರುವುದಿಲ್ಲ. ನಮ್ಮ ಧಾರವಾಡ ಜಿಲ್ಲೆಯ ಸದಸ್ಯರು ಬರೆದಿರುವ ಯಾವುದೇ ವಿಷಯದ ಲೇಖನ ಪರಿಗಣಿಸಲಾಗುವುದು.)
4) ಅತ್ಯುತ್ತಮ ಛಾಯಾಚಿತ್ರ
5) ಅತ್ಯುತ್ತಮ ಪುಟ ವಿನ್ಯಾಸ
6) ಟಿ.ವಿ. ಮಾಧ್ಯಮದಲ್ಲಿ ಪ್ರಕಟಗೊಂಡ ಅತ್ಯುತ್ತಮ ವರದಿಗಳು (ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.)
2019ರ ಜೂನ್ 1ರಿಂದ 2020ರ ಮೇ 31ರವರೆಗೆ ಪ್ರಕಟವಾದ, ಭಿತ್ತರಿಸಲಾದ ವರದಿಗಳು ಹಾಗೂ ಚಿತ್ರಗಳು ಈ ಪ್ರಶಸ್ತಿಗಳಿಗೆ ಅರ್ಹವಾಗಿರುತ್ತವೆ.
ಅರ್ಜಿ ಸಲ್ಲಿಸಬಯಸುವ ಪತ್ರಕರ್ತರು ಪತ್ರಿಕೆಯಲ್ಲಿ ಪ್ರಕಟವಾದ ತಮಗೆ ಅತ್ಯುತ್ತಮವೆನಿಸಿದ ಒಂದು ಲೇಖನ, ವರದಿ, ಸುದ್ದಿ ಛಾಯಾಚಿತ್ರದ ಪ್ರತಿ, ವಿನ್ಯಾಸ ಮಾಡಿದ ಪುಟದ ಪ್ರತಿಯನ್ನು ಒದಗಿಸಬೇಕು. ಸುದ್ದಿ ವಾಹಿನಿಯಲ್ಲಿ ಬಿತ್ತರಗೊಂಡ ವರದಿಯ ಪ್ರತಿ ಹಾಗೂ ವೀಡಿಯೋ ಕ್ಲಿಪಿಂಗ್ ನೀಡಬೇಕು. ಅರ್ಜಿಯ ಜತೆಗೆ ನೀವೇ ಆಯ್ಕೆ ಮಾಡಿದ ಒಂದು ವರದಿಯನ್ನು ಮಾತ್ರ ಲಗತ್ತಿಸಬೇಕು. ಎರಡು ವರದಿ ಲಗತ್ತಿಸಿದರೆ ಅಂತಹ ಅರ್ಜಿಗಳನ್ನು ಆಯ್ಕೆ ಸಮಿತಿಯು ತಿರಸ್ಕರಿಸುವ ಸಾಧ್ಯತೆಗಳಿರುತ್ತವೆ. ದಿ. 15-07-2020ರ ಸಂಜೆ 5 ಗಂಟೆಯ ಒಳಗಾಗಿ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ನಮ್ಮ ಸಂಘದ ಕಚೇರಿಗೆ ಅರ್ಜಿ ತಲುಪಿಸಬೇಕು. ಈ ಅವಧಿಯ ನಂತರ ಬಂದ ಅರ್ಜಿಗಳನ್ನು ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದಿಲ್ಲ.
ಮುದ್ರಣ ಮಾಧ್ಯಮದವರಿಗೆ ಪ್ರಶಸ್ತಿಯು ತಲಾ ಐದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಎಲೆಕ್ಟ್ರಾನಿಕ್ ಮಾಧ್ಯಮದವರಿಗೆ ಪ್ರಶಸ್ತಿಯು (ವರದಿಗಾರ ಹಾಗೂ ಕ್ಯಾಮೆರಾಮನ್ ಇಬ್ಬರಿಗೂ ಸೇರಿ) ತಲಾ 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮಾತ್ರ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧ್ಯಕ್ಷ ಗಣಪತಿ ಗಂಗೋಳ್ಳಿ ಹೇಳಿದ್ದಾರೆ.