Posts Slider

Karnataka Voice

Latest Kannada News

ನಾಳೆ ಬೆಳಿಗ್ಗೆಯಿಂದ 24 ಗಂಟೆ ಧಾರವಾಡ ಜಿಲ್ಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿ: ಜಿಲ್ಲಾಧಿಕಾರಿ ಆದೇಶ

1 min read
Spread the love

ಧಾರವಾಡ: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ 2020 ಕ್ಕೆ ಸಂಬಂಧಿಸಿಂದ ಡಿಸೆಂಬರ್ 30 ರಂದು ಮತ ಎಣಿಕೆ ಜರುಗಲಿರುವುದರಿಂದ ಮತ ಎಣಿಕೆ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಹಾಗೂ ಮತ ಏಣಿಕೆಯು ಸುಗಮವಾಗಿ ಮತ್ತು ಮುಕ್ತವಾಗಿ ಜರುಗಿಸುವ ಹಿತದೃಷ್ಠಿಯಿಂದ ಧಾರವಾಡ ಜಿಲೆಯಾದ್ಯಂತ ಸಿಆರ್‍ಪಿಸಿ 1973 ಕಲಂ 144ರ ಮೇರೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರತಿಬಂಧಕಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಧಾರವಾಡ ಜಿಲ್ಲೆಯಾದ್ಯಂತ ಡಿಸೆಂಬರ್ 30ರ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭಿಸಿ ಡಿಸೆಂಬರ್ 31ರ ಬೆಳಿಗ್ಗೆ 6 ಗಂಟೆಯ ವರೆಗೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುತ್ತದೆ. ಪ್ರತಿಬಂಧಕಾಜ್ಞೆ ಜಾರಿ ಇರುವ ಸಮಯದಲ್ಲಿ, ಧಾರವಾಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಚುನಾವಣೆಯ ಮತ ಏಣಿಕೆ ಜರುಗುತ್ತಿರುವ ನಿಮಿತ್ಯ 05 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ.

ಶಸ್ತ್ರ ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.

ಕಲ್ಲುಗಳನ್ನು, ಕ್ಷಾರಪಧಾರ್ಥ ಇಲ್ಲವೆ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸೆಯುವಂಥಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಯಾವುದೇ ವ್ಯಕ್ತಿ, ಸಾರ್ವಜನಿಕರಾಗಲಿ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.

ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೊವೀಡ್ ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ, ಮದುವೆ ಮತ್ತು ಇತರ ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.

ಗ್ರಾಮ ಪಂಚಾಯತ ಚುನಾವಣೆಗಳ ಮತ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮದ್ಯಪಾನ, ಮದ್ಯ ಮಾರಾಟ, ಮದ್ಯಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಧಾರವಾಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಗಳ ಮತ ಏಣಿಕೆ ಕಾರ್ಯವು ಡಿಸೆಂಬರ್ 30 ರಂದು ಜರಗುವ ಹಿನ್ನಲೆಯಲ್ಲಿ ಮತ ಎಣಿಕೆಯು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಜರಗುವ ಹಿತದೃಷ್ಠಿಯಿಂದ ಮತಗಳ ಎಣಿಕೆಯ ದಿವಸದಂದು ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹಣೆಯನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ಡಿಸೆಂಬರ್ 30 ರಂದು ಶುಷ್ಕ ದಿನವೆಂದು ಘೋಷಿಸಿ ಆದೇಶಿಸಿದ್ದಾರೆ.

ಧಾರವಾಡ ಜಿಲ್ಲೆಯ ಧಾರವಾಡ ಗ್ರಾಮೀಣ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ (ಹುಬ್ಬಳ್ಳಿ ಧಾರವಾಡ ಮಹಾನಗರ, ಪುರ ಸಭೆ ಮತ್ತು ಪಟ್ಟಣ ಪಂಚಾಯತ ವ್ಯಾಪ್ತಿ ಹೊರತುಪಡಿಸಿ) ಡಿಸೆಂಬರ್ 29ರ ರಾತ್ರಿ 11:59 ಗಂಟೆಯಿಂದ ಡಿಸೆಂಬರ್ 31 ರ ಬೆಳಿಗ್ಗೆ 6 ಗಂಟೆಯವರೆಗೆ  ಮತ ಏಣಿಕೆ ಜರಗುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹಣೆಯನ್ನು ನಿಷೇಧಿಸಿ, ಸದರಿ ದಿನಗಳನ್ನು ಶುಷ್ಕ ದಿನಗಳೆಂದು ಜಿಲ್ಲಾಧಿಕಾರಿ ಘೋಷಿಸಿ ಆದೇಶಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed