ಛತ್ರಿ ಕಡ್ಡಿ ತಲೆಯೊಳಗೆ: ಹದಿನಾಲ್ಕರ ಬಾಲಕ ದುರ್ಮರಣ- ಧಾರವಾಡದಲ್ಲಿ ಘಟನೆ

ಧಾರವಾಡ: ಮನೆಯಲ್ಲಿ ಸಹೋದರಿಯೊಂದಿಗೆ ಆಟವಾಡುತ್ತ ಕೆಳಗೆ ಬಿದ್ದ ಬಾಲಕನೋರ್ವನಿಗೆ ಛತ್ರಿಯ ಕಡ್ಡಿ ತಲೆಯೊಳಗೆ ನುಗ್ಗಿ, ಸಾವಿಗೀಡಾದ ಘಟನೆ ಧಾರವಾಡದ ಗೊಲ್ಲರ ಕಾಲೋನಿಯಲ್ಲಿ ಸಂಭವಿಸಿದೆ.
ಗಣೇಶ ಎಂಬ ಬಾಲಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. ತನ್ನದೇ ಮನೆಯಲ್ಲಿ ಖುರ್ಚಿಯಲ್ಲಿ ಕುಳಿತ ಸಮಯದಲ್ಲಿ, ಸಹೋದರಿ ಆಟವಾಡುತ್ತ, ಗಣೇಶನನ್ನ ಕೆಳಕ್ಕೆ ನೂಕಿದ್ದಾಳೆ. ಖುರ್ಚಿಯ ಕೆಳಗಡೆ ಮುರಿದು ಬಿದ್ದ, ಛತ್ರಿಯ ಕಡ್ಡಿ ತಲೆಯೊಳಗೆ ಮೂರ್ನಾಲ್ಕು ಇಂಚು ಒಳ ಹೋಗಿದೆ. ಏನೂ ಅರಿಯದ ಮನೆಯವರು, ಕಡ್ಡಿಯನ್ನ ಹೊರ ತೆಗೆದಿದ್ದಾರೆ.
ಮನೆಯವರ ಅಜಾಗರೂಕತೆಯಿಂದ ತೀವ್ರವಾದ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇಂದು ಇಳಿಸಂಜೆ ಬಾಲಕ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಬಾಲಕನ ತಂದೆ ಒಂದು ವರ್ಷದ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದರು. ಈಗ ಮಗ ಮತ್ತೊಂದು ಅವಘಡದಲ್ಲಿ ಸಾವಿಗೀಡಾಗಿದ್ದಾನೆ.
ಬಾಲಕನ ಸಾವಿನಿಂದ ಕಂಗಾಲಾದ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು.