ರಾತ್ರಿ ಗಸ್ತಿನಲ್ಲಿದ್ದಾಗ ಜೀಪ್ ಅಪಘಾತ: ಎಎಸ್ಐ, ಹೆಡ್ ಕಾನ್ಸಟೇಬಲ್ ದುರ್ಮರಣ

ಮೈಸೂರು: ರಾತ್ರಿ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಯ ತಪ್ಪಿ ಮರಕ್ಕೆ ಜೀಪು ಡಿಕ್ಕಿ ಹೊಡೆದ ಎಎಸ್ಐ ಹಾಗೂ ಹೆಡ್ ಕಾನ್ಸಟೇಬಲ್ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಿದ್ಧನಕೊಪ್ಪಲು ಗ್ರಾಮದ ಬಳಿ ನಡೆದಿದೆ.
ಘಟನೆಯಲ್ಲಿ ಎಎಸ್ಐ ಮೂರ್ತಿ ಹಾಗೂ ಹೆಡ್ ಕಾನ್ಸಟೇಬಲ್ ಶಾಂತಕುಮಾರ್ ಸಾವಿಗೀಡಾಗಿದ್ದಾರೆ. ವಾಹನ ಆಯತಪ್ಪಿ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ಜೀಪಿನಲ್ಲಿಯೇ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ರಾತ್ರಿ ಎಂಟರಿಂದ ಆರಂಭವಾಗಿದ್ದ ಡ್ಯೂಟಿಯಲ್ಲಿ ಗಸ್ತು ಆರಂಭಿಸಿದ ಇಬ್ಬರು ಅಧಿಕಾರಿಗಳು, ಸುಮಾರು ಒಂದು ಗಂಟೆಗಳ ಕಾಲ ಗಸ್ತು ಆರಂಭಿಸಿ, ಯಾವುದೇ ತೊಂದರೆ ಇಲ್ಲದಿರುವುದನ್ನ ನೋಡುತ್ತಲೇ, ಮತ್ತೆ ಬೇರೆ ಕಡೆ ಗಸ್ತಿಗೆ ಹೊರಟಿದ್ದರು.
ಕತ್ತಲು ಕವಿದಿದ್ದರಿಂದ ಆಯತಪ್ಪಿ ಜೀಪ್ ಮರಕ್ಕೆ ಡಿಕ್ಕಿ ಹೊಡೆದಿದೆ. ತೀವ್ರವಾದ ರಕ್ತ ಸ್ರಾವವಾಗಿದ್ದರಿಂದ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.