ಕೋಟಿಗಟ್ಟಲೇ ಮನೆ, ಲಕ್ಷಗಟ್ಟಲೇ ಹಣ, ಕೆಜಿಗಟ್ಟಲೇ ಬೆಳ್ಳಿ-ಬಂಗಾರ: ಇದು ಹುಬ್ಬಳ್ಳಿಯಲ್ಲಿ ಸಿಕ್ಕ “ದುರಾಸ್ತಿ”
1 min readಹುಬ್ಬಳ್ಳಿ: ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ದೇವರಾಜ ಕಲ್ಮೇಶ ಶಿಗ್ಗಾಂವಿಯವರ ಮೇಲೆ ನಡೆದ ದಾಳಿಯಲ್ಲಿ ಪತ್ತೆಯಾದ ಅಕ್ರಮ ಆಸ್ತಿಯ ವಿವರವನ್ನ ಎಸಿಬಿ ನೀಡಿದ್ದು, ಅಧಿಕಾರಿಯು ಕೋಟ್ಯಾಧಿಪತಿಯಾಗಿರುವುದು ಬೆಳಕಿಗೆ ಬಂದಿದೆ.
ಇಂದು ಬೆಳಿಗ್ಗೆ ಎಸಿಬಿ ರೇಡ್ ಮಾಡಿದ ನಂತರ ನಡೆದ ತಪಾಸಣೆಯ ವೇಳೆಯಲ್ಲಿ ಮೂರು ಅಂತಸ್ತಿನ ಮನೆ, ಎರಡು ಅಂತಸ್ತಿನ ಎರಡು ಮನೆಗಳು, ಎರಡು ಖಾಲಿ ನಿವೇಶನಗಳು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಇನಾಂ ನೀರಲಗಿ ಮತ್ತು ದೇವರ ಗುಡಿಹಾಳ ಗ್ರಾಮದ ಬಳಿಯಲ್ಲಿ 26 ಎಕರೆ ಕೃಷಿ ಜಮೀನು, 8 ಲಕ್ಷ ಮೌಲ್ಯದ ಎರಡು ವಾಹನಗಳು, 59ಲಕ್ಷ 84 ಸಾವಿರ ನಗದು ಹಣ, ಎಫ್ ಡಿ ಖಾತೆಯಲ್ಲಿ 30 ಲಕ್ಷ ರೂಪಾಯಿ, 500 ಗ್ರಾಂ ಬಂಗಾರ, 4ಕೆಜಿ ಬೆಳ್ಳಿ, 3ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ದೊರೆತಿವೆ.
ಎಸಿಬಿಯ ಅಪರ ಪೊಲೀಸ್ ಮಹಾನಿರ್ದೇಶಕ ಸೀಮಂತಕುಮಾರ ಸಿಂಗ್, ಪ್ರಭಾರ ಪೊಲೀಸ್ ಮಹಾನಿರೀಕ್ಷಕ ಕುಲದೀಪಕುಮಾರ ಜೈನ್ ನಿರ್ದೇಶನದಲ್ಲಿ ಉತ್ತರ ವಲಯ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಧಾರವಾಡ ಎಸಿಬಿ ಪೊಲೀಸ್ ಠಾಣೆಯ ಡಿಎಸ್ಪಿ ಎಲ್.ವೇಣುಗೋಪಾಲ, ಇನ್ಸಪೆಕ್ಟರುಗಳಾದ ಎಂ.ಜಿ.ಹಿರೇಮಠ, ಪಿ.ಈ.ಕವಟಗಿ, ಸಮೀರ ಮುಲ್ಲಾ, ಎ.ಎಸ್.ಗುದಿಗೊಪ್ಪ, ಬಿ.ಎ.ಜಾಧವ ಮತ್ತು ಗಿರೀಶ ಮನಸೂರ ಅವರುಗಳು ಈ ಪ್ರಕರಣದಲ್ಲಿ ಆದಾಯಕ್ಕಿಂತ ಹೆಚ್ಚುವರಿ ಆಸ್ತಿ ಮಾಹಿತಿಯನ್ನ ಗೌಪ್ಯವಾಗಿ ಸಂಗ್ರಹಿಸಿ ವರದಿಯನ್ನ ಸಲ್ಲಿಸಿದ್ದರು.