Posts Slider

Karnataka Voice

Latest Kannada News

ಬೆಂಗಳೂರಲ್ಲಿ ‘ಹುಬ್ಬಳ್ಳಿ ಕಾಲಿಂಗ್’: ಆಮ್ ಆದ್ಮಿ ವಿಶಿಷ್ಟ್ ಕಾರ್ಯಕ್ರಮ

1 min read
Spread the love

ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷ ‘ಹುಬ್ಬಳ್ಳಿ ಕಾಲಿಂಗ್’ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಐಟಿ ನೀತಿ 2020 25ರ ಅಡಿಯಲ್ಲಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯ ಪ್ರಾರಂಭಿಸಲು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ. ಉಪಮುಖ್ಯಮಂತ್ರಿ ಮತ್ತು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಅಭಿವೃದ್ಧಿ ಸಚಿವ ಡಾ. ಅಶ್ವಥ್ ನಾರಾಯಣ ಅವರಿಗೆ ಆಮ್ ಆದ್ಮಿ ಪಕ್ಷ ಪತ್ರದ ಮೂಲಕ ಈ ವಿಷಯವನ್ನು ವಿವರವಾಗಿ ತಿಳಿಸಿದೆ.


ಐಟಿ ವಲಯ ಅಭಿವೃದ್ಧಿಯ ‘ಬಿಯಾಂಡ್ ಬೆಂಗಳೂರು’ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಗುರುತಿಸಲಾಗಿರುವ ಆರು ನಗರಗಳಲ್ಲಿ ಹುಬ್ಬಳ್ಳಿ-ಧಾರವಾಡವನ್ನು ಸೇರಿಸುವ ಸರ್ಕಾರದ ನಿರ್ಧಾರವನ್ನು ಎಎಪಿ ಶ್ಲಾಘಿಸುತ್ತದೆ. ಆದರೆ, ಅವಳಿ ನಗರವು ಬೆಂಗಳೂರಿನಂತೆಯೇ ರಾಜ್ಯದಲ್ಲಿ ವಿಶಿಷ್ಟವಾಗಿದೆ. ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಹೆಬ್ಬಾಗಿಲು. ಆದ್ದರಿಂದ  ಸರ್ಕಾರವು ಹುಬ್ಬಳ್ಳಿ-ಧಾರವಾಡ ಪ್ರಕರಣವನ್ನು ‘ಹುಬ್ಬಳ್ಳಿ ಕಾಲಿಂಗ್’ ಕಾರ್ಯಕ್ರಮದಡಿಯಲ್ಲಿ ಸ್ವತಂತ್ರವಾಗಿ ಶ್ರೇಣಿ-1 ನಗರವಾಗಿ ಪರಿಗಣಿಸಬೇಕು. ಕೊರೋನಾ ಮಹಾಮಾರಿ ಪರಿಣಾಮವಾಗಿ ದೂರಸ್ಥ ಕಾರ್ಯ ಮಾದರಿಯು ಹುಬ್ಬಳ್ಳಿ-ಧಾರವಾಡಿನಲ್ಲಿ ಐಟಿ ಉದ್ಯಮವನ್ನು ಸ್ಥಾಪಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಕರ್ನಾಟಕದ ರಾಜಧಾನಿಯನ್ನು ಹೊರತುಪಡಿಸಿ, ಹುಬ್ಬಳ್ಳಿ-ಧಾರವಾಡವು ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿರುವ ಎಕೈಕ ನಗರವಾಗಿದೆ. ಹುಬ್ಬಳ್ಳಿ-ಧಾರವಾಡ ನಗರದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು ಕೈಗಾರಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ. ವಿಶೇಷವಾಗಿ ಎಂಎಸ್‌ಎಂಇಗಳು, ಹುಬ್ಬಳ್ಳಿ-ಧಾರವಾಡದ ಸುಮಾರು 3-4 ಲಕ್ಷ ಜನರು ಆರ್ಥಿಕ ಚಟುವಟಿಕೆಗಳಿಗಾಗಿ ಮತ್ತು ತಮ್ಮ ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಐಟಿ ನೀತಿಯಲ್ಲಿ ಪ್ರಸ್ತಾಪಿಸಿದಂತೆ ಕೇವಲ  ‘ಸುಗಮ  ಸಂಪರ್ಕ ಮತ್ತು ದಕ್ಷ ದೂರಸಂಪರ್ಕ ಒದಗಿಸುವ ಮೂಲಕ’ ಬೆಂಗಳೂರಿನ ಆಚೆಗೆ ಐಟಿ ಕೈಗಾರಿಕೆಗಳನ್ನು ಸ್ಥಾಪಿಸುವುದು  ಸಾಧ್ಯವಾಗಲಿದೆ  ಎಂಬುದು ಸಂಪೂರ್ಣ ಸತ್ಯವಲ್ಲ. ಬೆಂಗಳೂರಿನ ಆಚೆಗೆ ಐಟಿ ಉದ್ಯಮಿಗಳು ತಮ್ಮ ಸೌಲಭ್ಯಗಳನ್ನು ತೆರೆಯುವಲ್ಲಿ ಎದುರಿಸುವ ಇತರ ಅಡೆತಡೆಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸರ್ಕಾರವು ಗಂಭೀರವಾಗಿ ಗಮನ ಹರಿಸಬೇಕಾಗಿದೆ.
ಹುಬ್ಬಳ್ಳಿಯ ಸುಮಾರು 43 ಎಕರೆ ಪ್ರದೇಶದಲ್ಲಿ ಇನ್ಫೋಸಿಸ್ ಕಂಪನಿ ಅಭಿವೃದ್ಧಿಪಡಿಸಿರುವ ವಿಶ್ವ ದರ್ಜೆಯ ಸೌಲಭ್ಯವು ಒಂದು ಉದಾಹರಣೆಯಾಗಿದೆ. ಸುಮಾರು 3.5 ವರ್ಷಗಳ ಹಿಂದೆಯೇ ಕಾರ್ಯಾ ಪ್ರಾರಂಭಿಸಲು ಈ ಸೌಲಭ್ಯ ಪೂರ್ಣಗೊಳಿಸಲಾಯಿತು.  ಆದರೆ, ಈ ಕ್ಯಾಂಪಸ್‌ನಲ್ಲಿ ಇವತ್ತಿನ ವರೆಗೆ ಏನೂ ನಡೆಯುತ್ತಿಲ್ಲ! ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್ ಸುಮಾರು 3000 ಎಂಜಿನಿಯರ್‌ಗಳು ಮತ್ತು ಐಟಿ ವೃತ್ತಿಪರರಿಗೆ ನೇರ ಉದ್ಯೋಗ  ಮತ್ತು ಸಹಾಯಕ ಸಿಬ್ಬಂದಿಗೆ ನೂರಾರು ಇತರ ಉದ್ಯೋಗಗಳನ್ನು ಒದಗಿಸುವ ಕ್ಷಮತೆ ಹೊಂದಿದೆ. ಇದಲ್ಲದೆ, ನಗರದಲ್ಲಿ ಇನ್ಫೋಸಿಸ್ ನಂತಹ ಬೃಹತ್ ಐಟಿ ಕಂಪನಿ ಕಾರ್ಯಾರಂಭಿಸಿದರೆ, ಅದರಿಂದ ಮಹಾನಗರದ ಆರ್ಥಿಕತೆಗೆ ಉತ್ತೇಜನ ಸಿಗುವುದು. ಜತೆಗೆ ಐಟಿ ಉದ್ಯಮಕ್ಕಾಗಿ ಪರಿಸರ ವ್ಯವಸ್ಥೆ ಅಭಿವೃದ್ಧಿಗೊಳ್ಳುತ್ತದೆ ಮತ್ತು ಇತರ ಐಟಿ ಉದ್ಯಮಿದಾರರು ತಮ್ಮ ಸೌಲಭ್ಯಗಳನ್ನು ಇಲ್ಲಿ ಸ್ಥಾಪಿಸಲು ಅನುವಾಗುತ್ತದೆ. ಇನ್ಫೋಸಿಸ್ ಅವಳಿ ನಗರಗಳ ಆರ್ಥಿಕತೆಗೆ (ಜಿಡಿಪಿ ಗೆ) ಸುಮಾರು 300 ಕೋಟಿ ರೂಪಾಯಿಗಳನ್ನು ಸೇರಿಸಲಿದೆ. ಇನ್ಫೋಸಿಸ್ನ ಯಶಸ್ಸಿನೊಂದಿಗೆ, ಐಟಿ ಉದ್ಯಮವು 2025 ರ ವೇಳೆಗೆ ಹುಬ್ಬಳ್ಳಿ-ಧಾರವಾಡಿನ ಜಿಡಿಪಿ ಗೆ 3000 ಕೋಟಿ ರೂಪಾಯಿಗಳನ್ನು ಸೇರಿಸಬಹುದು. ಹುಬ್ಬಳ್ಳಿ ಶ್ರೀಮತಿ ಸುಧಾ ಮೂರ್ತಿ ಅವರ ತವರೂರು ಆಗಿದ್ದು, ಅವರು ಇಲ್ಲಿ ಹಲವಾರು ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಸಹ, ಇನ್ಫೋಸಿಸ್ ತನ್ನ ಹುಬ್ಬಳ್ಳಿಯ ಕ್ಯಾಂಪಸ್‌ನಲ್ಲಿ ಈವರೆಗೆ ವ್ಯವಹಾರವನ್ನು ಪ್ರಾರಂಭ ಮಾಡಿರುವುದಿಲ್ಲ. ಇದಕ್ಕೆ ಮೂಲ ಕಾರಣಗಳಾದರೂ ಏನು? ಕಂಪನಿ ಯಾವಯಾವ ಅಡೆತಡೆಗಳನ್ನು ಎದುರಿಸುತ್ತಿದೆ ಎಂಬುದು ಸರ್ಕಾರ ಕಂಡುಹಿಡಿಯಬೇಕು.
ಭಾರತದ ಉನ್ನತ ಐಟಿ ಕಂಪನಿಯೊಂದು, ಹುಬ್ಬಳ್ಳಿಯಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಿದ ತನ್ನ ಒಂದು ಸೌಲಭ್ಯ ಅಭಿವೃದ್ಧಿಪಡಿಸಿ 3.5  ವರ್ಷಗಳು ಕಳೆದರೂ, ಈ ಸೌಲಭ್ಯವು ಬಹುತೇಕ ನಿರ್ಜನ ಸ್ಥಿತಿಯಲ್ಲಿರುವ ಮೂಲ ಕಾರಣವನ್ನು ಕಂಡುಹಿಡಿಯಲು ಅವಳಿ ನಗರಕ್ಕೆ ಭೇಟಿ ನೀಡುವಂತೆ ಪಕ್ಷವು ಡಿಸಿಎಂ ಅಶ್ವಥ್ ನಾರಾಯಣ ಅವರಿಗೆ ಆಗ್ರಹಿಸಿದೆ. ಕೈಗಾರಿಕೆಗಳು ಮತ್ತು ಇನ್ಫೋಸಿಸ್‌ನಂತಹ ಐಟಿ ಕಂಪನಿಗಳು ಹುಬ್ಬಳ್ಳಿ-ಧಾರವಾಡದಿಂದ ಕಾರ್ಯನಿರ್ವಹಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಸರ್ಕಾರ ಗಂಭೀರವಾಗಿ ಗಮನಿಸಬೇಕು ಮತ್ತು ಧಾರವಾಡ ಜಿಲ್ಲಾಡಳಿತದ ನೆರವಿನಿಂದ ಅವುಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ, ಕರ್ನಾಟಕ ಐಟಿ ನೀತಿಯ ‘ಬಿಯಾಂಡ್ ಬೆಂಗಳೂರು’ ಉದ್ದೇಶವು ಸಹ ಹಿಂದಿನ ಮತ್ತು ಈ ಸರ್ಕಾರ ಬೆಂಗಳೂರು ಹೊರತುಪಡಿಸಿ ಇತರ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಘೋಷಣೆ ಮಾಡಿ ಈಡೇರಿಸಲಾರದ ಯೋಜನೆಗಳ ಉದ್ದ ಪಟ್ಟಿಗೆ ಸೇರುತ್ತದೆ.
ನಮ್ಮ ಯುವಕರಿಗೆ ಸಾಕಷ್ಟು ಉದ್ಯೋಗಗಳು, ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳು ಮತ್ತು ನಗರದ ಜನರಿಗೆ ವಸತಿ, ರಸ್ತೆಗಳು, ನೀರು, ಸಾರಿಗೆ ಮತ್ತು ಮನರಂಜನೆಯಂತಹ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡನ್ನು ವಿಶ್ವ ದರ್ಜೆಯ ನಗರವಾಗಿ ಅಭಿವೃದ್ಧಿಪಡಿಸುವುದಾಗಿ ಆಮ್ ಆದ್ಮಿ ಪಕ್ಷ ಪಣತೊಟ್ಟಿದೆ.
ಇನ್ಫೋಸಿಸ್ನಂತಹ ಸೌಲಭ್ಯಗಳ ಪ್ರಾರಂಭವು ಅವಳಿ-ನಗರಗಳ ಜನರ ಆರ್ಥಿಕ ಏಳಿಗೆಗೆ ಪ್ರಮುಖವಾದುದು. ಇದು ಮನಸ್ಸಿಲ್ಲದೆ ಬೆಂಗಳೂರಿಗೆ ವಲಸೆ ಬಂದಿರುವ ನಮ್ಮ ಪ್ರತಿಭಾವಂತ ಎಂಜಿನಿಯರ್‌ಗಳು, ಐಟಿ ಸಿಬ್ಬಂದಿ ಮತ್ತು ಸಂಬಂಧಿತ ಸಿಬ್ಬಂದಿಯನ್ನು ಮರಳಿ ತರುತ್ತದೆ ಮತ್ತು ಬೆಂಗಳೂರಿನ ಮೇಲಿನ ಹೊರೆ ಕಡಿಮೆ ಮಾಡುತ್ತದೆ. 2020 ರ ಅಂತ್ಯದ ಮೊದಲು ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ನ ಕೆಲಸ ಪ್ರಾರಂಭಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳನ್ನು ಎಎಪಿ ಎದುರು ನೋಡುತ್ತಿದೆ. ಇದು ನಿಜಕ್ಕೂ ಐಟಿ ನೀತಿ 2020-25 ಕ್ಕೆ ಮತ್ತು ಉತ್ತರ ಕರ್ನಾಟಕ ದ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯ ಗಣನೀಯ ಪರೀಕ್ಷೆಯಾಗಿದೆ.
ಇದೇ 27 ನವೆಂಬರ್ 2020ರಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್ ಎದುರು ‘ಹುಬ್ಬಳ್ಳಿ ಕಾಲಿಂಗ್’ ಎಂಬ ಶೀರ್ಷಿಕೆಯಲ್ಲಿ ವಿಶಿಷ್ಟ ಕಾರ್ಯಕ್ರಮದ ಮೂಲಕ ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಕೆಲಸ ಪ್ರಾರಂಭಿಸಲು ಆಮ್ ಆದ್ಮಿ ಪಕ್ಷ ಒತ್ತಾಯಿಸುವುದು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ಮತ್ತು ಯುವ ಐಟಿ ಉದ್ಯಮಿ  ಸನಾ ಕುದರಿ, ಆದಿತ್ಯ ನಾಯಕ, ಹಸನ್ ಅಲಿ ಶೇಖ್, ಹಸನ್ ಅಲಿ ಶೇಖ್, ಡಾ. ವಿ.ಬಿ. ಮಾಗನೂರ ಮತ್ತಿತರರು ಇದ್ದರು.


Spread the love

Leave a Reply

Your email address will not be published. Required fields are marked *