ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿಯವರಿಗೆ ಕೊರೋನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು
ಧಾರವಾಡ: ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಕೊರೋನಾ ಪಾಸಿಟಿವ್ ದೃಢಪಡುತ್ತಿರುವುದು ಮುಂದುವರೆದಿದೆ. ಈಗ ಕುಂದಗೋಳದ ಶಾಸಕಿ ಕುಸುಮಾವತಿ ಶಿವಳ್ಳಿಯವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಸಂಚರಿಸುತ್ತಿರುವ ಧಾರವಾಡ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರದಿಂದ ಬಳಲುತ್ತಿದ್ದ ಶಾಸಕಿಯನ್ನ ತಪಾಸಣೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗಿದೆ.
ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ನಾಳೆಯಿಂದ ನಡೆಯುವ ಅಧಿವೇಶನದಿಂದ ಶಾಸಕಿ ಕುಸುಮಾವತಿ ದೂರವುಳಿಯಬೇಕಾಗಿದೆ. ಅವರ ಜೊತೆಗಿದ್ದವರು ಕೂಡಾ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಶಾಸಕಿ ವಿನಂತಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ ಕೊರೋನಾ ಪಾಸಿಟಿವ್ ನಿಂದ ಗುಣಮುಖರಾಗಿ ಹೊರಗೆ ಬಂದಿದ್ದು, ಕುಸುಮಾವತಿಯವರಿಗೆ ಕೊರೋನಾ ಆಗುವ ಮೂಲಕ ಮೂರನೇಯ ಶಾಸಕರಿಗೆ ತಗುಲಿದಂತಾಗಿದೆ.