ಮಹದೇವ ಮಾಳಗಿ ಪತ್ನಿಗೆ ನೌಕರಿ ಕೊಡಿ: ಸಚಿವ ಸುರೇಶಕುಮಾರಗೆ ಮುನೇನಕೊಪ್ಪ ಮನವಿ
1 min readಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಅನಾರೋಗ್ಯದಿಂದ ಬಳಲುತ್ತಿರುವ ಮಹದೇವ ಮಾಳಗಿಯವರ ಪತ್ನಿಗೆ ಸರಕಾರಿ ನೌಕರಿ ನೀಡಬೇಕೆಂದು ಶಾಸಕ ಹಾಗೂ ಕೆಯುಐಡಿಎಫ್ ಸಿ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪ ಶಿಕ್ಷಣ ಸಚಿವ ಸುರೇಶಕುಮಾರರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಲಿಖಿತವಾಗಿ ಮನವಿ ಮಾಡಿಕೊಂಡಿರುವ ಶಂಕರ ಪಾಟೀಲಮುನೇನಕೊಪ್ಪ, ಮಹದೇವ ಮಾಳಗಿಯವರ ಆರ್ಥಿಕ ಸೌಲಭ್ಯಗಳನ್ನ ನೀಡುವ ಜೊತೆಗೆ ಅವರ ಪತ್ನಿಗೆ ನೌಕರಿ ನೀಡಬೇಕೆಂದು ಕೋರಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಲವು ಸ್ಥಳಗಳಲ್ಲಿ ಕಾರ್ಯನಿರ್ವಹಣೆ ಮಾಡಿರುವ ಮಹದೇವ ಮಾಳಗಿಯವರ ಇವತ್ತಿನ ಸ್ಥಿತಿಯ ಬಗ್ಗೆಯೂ ವಿವರವಾಗಿ ಸಚಿವರಿಗೆ ತಿಳಿಸಿರುವ ಶಾಸಕ ಮುನೇನಕೊಪ್ಪ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಮನವಿ ಮಾಡಿಕೊಂಡಿರುವ ಬಗ್ಗೆಯೂ ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ಮಾಳಗಿಯವರ ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಸೌಲಭ್ಯಗಳನ್ನ ನೀಡಬೇಕೆಂದು ಸಚಿವ ಸುರೇಶಕುಮಾರರಿಗೆ ಮನವಿ ಮಾಡಿದ್ದಾರೆ.